ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಲೈಂಗಿಕ ಕಾರ್ಯಕರ್ತರು ವೃತ್ತಿ ವಿಮುಖರಾಗಲು ಸಹಕರಿಸಿ

Rashmi Kasaragodu
Updated On : 28 Jun 2013, 11:40 am

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 26
ಲೈಂಗಿಕ ಕಾರ್ಯಕರ್ತರ ಮೇಲೆ ಅಮಾನವೀಯವಾಗಿ ದೈಹಿಕ ದೌರ್ಜನ್ಯಗಳು ನಡೆಯುತ್ತಿವೆ. ಈ ವಿಷಯದಲ್ಲಿ ಮಾಧ್ಯಮ ವರದಿ ಮಾಡುವಾಗ ಪದಬಳಕೆಯನ್ನು ಜಾಗರೂಕತೆಯಿಂದ ಮಾಡಬೇಕು. ಲೈಂಗಿಕ ಕಾರ್ಯಕರ್ತರನ್ನು ಈ ವೃತ್ತಿಯಿಂದ ವಿಮುಖರಾಗುವಂತೆ ಮಾಡಲು ಸಂಘ-ಸಂಸ್ಥೆಗಳ ಜತೆಗೆ ಪೊಲೀಸ್, ಮಾಧ್ಯಮ ಕೈಜೋಡಿಸಬೇಕೆಂದು ಕರ್ನಾಟಕ ಆರೋಗ್ಯ ಪ್ರತಿಷ್ಠಾನದ ಹಿರಿಯ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯ ಮನವಿ ಮಾಡಿದರು.
ಬೆಳಕು ಮಹಿಳಾ ಸಂಘ ಹಾಗೂ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಬುಧವಾರ ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಏರ್ಪಡಿಸಿದ್ದ 'ಲೈಂಗಿಕ ಕಾರ್ಯಕರ್ತರ ಮೇಲಿನ ಹಿಂಸೆ ಹಾಗೂ ಲೈಂಗಿಕ ದೌರ್ಜನ್ಯ' ಕುರಿತಾದ ಮಾಧ್ಯಮ ಪ್ರತಿನಿಧಿಗಳ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಹಿಳೆ ಕುಟುಂಬದ ಹಾಗೂ ವೈಯಕ್ತಿಕ ಹಿಂಸೆಯ ಅನಿರೀಕ್ಷಿತ ಘಟನೆಗಳಿಂದ ಲೈಂಗಿಕ ವೃತ್ತಿಗೆ ಸಿಲುಕಿಕೊಳ್ಳುತ್ತಾಳೆ ಎಂದರು.
ತನ್ನ ಜೀವನ ರೂಪಿಸಿಕೊಳ್ಳಲು ಪರ್ಯಾಯ ಉಪಾಯ ಕಂಡರೂ ಸಮಾಜ ಅವಳನ್ನು ಲೈಂಗಿಕ ವೃತ್ತಿಯ ದೃಷ್ಟಿಕೋನದಲ್ಲೇ ನೋಡುತ್ತದೆ. ಸಮಾಜ ಇದನ್ನು ಅರ್ಥೈಸಿಕೊಂಡು ಅವರಿಗೆ ಪುನರ್ ವಸತಿ ಕಲ್ಪಿಸುವಲ್ಲಿ ಚಿಂತನೆ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉದ್ಯೋಗಕ್ಕೆ ಹಚ್ಚಿ: ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಪ್ರಾದೇಶಿಕ ವ್ಯವಸ್ಥಾಪಕಿ ದೀಪಾ ರೋಸ್, ಇದುವರೆಗಿನ ಸಂಶೋಧನೆ ಮತ್ತು ಮಾಹಿತಿ ಪ್ರಕಾರ ಮಹಿಳೆಯರು ಅನಿವಾರ್ಯವಾಗಿ ಲೈಂಗಿಕ ವೃತ್ತಿಗೆ ಇಳಿಯುತ್ತಿದ್ದಾರೆ. ಧಾರವಾಡದ ಪ್ರದೇಶದಲ್ಲಿ ಮಹಿಳೆಯರ ದೌರ್ಜನ್ಯಗಳನ್ನು ನಿವಾರಿಸುವುದಕ್ಕಾಗಿ ಬೆಳಕು ಮಹಿಳಾ ಸಂಘವನ್ನು ಸ್ಥಾಪಿಸಲಾಗಿದೆ. ಒಟ್ಟಾರೆ ಲೈಂಗಿಕ ವೃತ್ತಿದಾರರ ಆರೋಗ್ಯ ಸುಧಾರಣೆ ಮತ್ತು ಅವರನ್ನು ಆ ವೃತ್ತಿಯಿಂದ ಬೇರೆ ಉದ್ಯೋಗದತ್ತ ವಿಮುಖರಾಗುವಂತೆ ಮಾಡುವುದು ಸೇರಿದಂತೆ ಹೊಸದಾಗಿ ವೃತ್ತಿಗೆ ಕಾಲಿಡುತ್ತಿದ್ದವರನ್ನು ಗುರುತಿಸಿ ಅವರನ್ನು ಅಪ್ತಸಮಾಲೋಚನೆ ಮಾಡುವ ಮೂಲಕ ಬೇರೆ ಉದ್ಯೋಗಕ್ಕೆ ಹಚ್ಚುವ ಯೋಜನೆ ನಮ್ಮ ಮುಂದಿದೆ ಎಂದರು.
ಪ್ರಸ್ತುತ ಲೈಂಗಿಕ ಕಾರ್ಯಕರ್ತರಿಗೆ ಸಮಾಜದಲ್ಲಿ ಎಳ್ಳಷ್ಟು ಬೆಲೆ ಇಲ್ಲ. ಸ್ವಾತಂತ್ರ್ಯವಂತೂ ದೂರದ ಮಾತು. ಮಾರುಕಟ್ಟೆಗೆ ಹೋದರೂ ಅವಳ ಮೇಲೆ ದೌರ್ಜನ್ಯಗಳು ನಡೆಯುತ್ತವೆ. ಪೊಲೀಸರಿಗೆ ದೂರು ನೀಡಿದರೂ ಲೈಂಗಿಕ ವೃತ್ತಿದಾರರೆಂದು ಅವರನ್ನೇ ನಿಂದಿಸಿ ಕಳಿಸುವ ಪ್ರವೃತ್ತಿ ಇದೆ. ಲೈಂಗಿಕ ವೃತ್ತಿದಾರರನ್ನು ಆ ವೃತ್ತಿಯಿಂದ ಬೇರೆ ಉದ್ಯೋಗದತ್ತ ಸೆಳೆಯಲು ಪೊಲೀಸ ಹಾಗೂ ಮಾಧ್ಯಮ ಸಹಾಯಬೇಕೆಂದು ಕೇಳಿದರು.
ಅನಂತರ ನಡೆದ ಸಂವಾದದಲ್ಲಿ ಜಿಲ್ಲೆಯ ವಿವಿಧ ಪತ್ರಿಕೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳು, ಲೈಂಗಿಕ ಕಾರ್ಯಕರ್ತರು ತಮ್ಮ ವೃತ್ತಿಯಿಂದ ವಿಮುಖ ಹೊಂದಲು ಕೆಲ ಸಲಹೆ-ಸೂಚನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement