ವ್ಯಸನದಿಂದ ಜೀವನ ಹಾಳು
ಕುಂದಗೋಳ: ಇಂದಿನ ಯುವ ಜನಾಂಗವು ಮೋಜು ಮಸ್ತಿಗಾಗಿ ವ್ಯಸನಕ್ಕೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಗುಡಗೇರಿ ಪಿಎಸ್ಐ ಸುರೇಶ ಗಡ್ಡಿ ವಿಷಾದ ವ್ಯಕ್ತಪಡಿಸಿದರು.
ಅವರು ಬುಧವಾರ ಗುಡಗೇರಿಯ ಪ.ಚ.ಮ ಸರ್ಕಾರಿ ಪಪೂ ಕಾಲೇಜಿನಲ್ಲಿ ಪೋಲೀಸ್ ಇಲಾಖೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ಮಾದಕ ದ್ರವ್ಯಗಳ ಸೇವನೆ ಕೈಬಿಟ್ಟು ಸದೃಢ ಆರೋಗ್ಯವಂತರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾಡರಕೊಪ್ಪ, ಮಾದಕ ದ್ರವ್ಯ ಸೇವನೆಯಿಂದ ಆಗುವ ತೊಂದರೆ ಹಾಗೂ ಅಡ್ಡ ಪರಿಣಾಮದ ಕುರಿತು ವಿವರಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಾಯಕೊಂಡ, ಡಾ. ಬಿಂಕದಕಟ್ಟಿ, ಪೊಲೀಸ್ ಸಿಬ್ಬಂದಿಯಾದ ಸಚಿನ್ ಪಾಟೀಲ್, ಡಿ.ವಿ. ಪಾಟೀಲ, ಜೆ.ಕೆ. ರವಿಕುಮಾರ, ಎಂ.ಆರ್. ಮಂಟೂರ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ವಿದ್ಯಾರ್ಥಿಗಳು ಜಾಥಾ ಮೂಲಕ ಜಾಗೃತಿ ಮೂಡಿಸಿದರು.