ಅತ್ಯಾಚಾರಿಗೆ ಜೀವಾವಧಿ ಜೈಲು
ಕ.ಪ್ರ. ವಾರ್ತೆ, ಧಾರವಾಡ, ಜೂ. 28-
ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ತಾಲೂಕಿನ ಶಿಬಾರಗಟ್ಟಿ ಗ್ರಾಮದ ಶಿವಪ್ಪ ಮಾದರಗೆ ಶುಕ್ರವಾರ ಧಾರವಾಡದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಅಪರಾಧಿಗೆ 10 ಸಾವಿರ ದಂಡ ಹಾಗೂ ನೊಂದ ಬಾಲಕಿ ತಂದೆಗೆ 1 ಲಕ್ಷ ಪರಿಹಾರ ನೀಡಲೂ ಕೋರ್ಟ್ ಸೂಚಿಸಿದೆ.
2012ರ ಮೇನಲ್ಲಿ ಜಾರಿಗೆ ಬಂದ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕಲಂ 6ರ ಪ್ರಕಾರ ನ್ಯಾಯಾಧೀಶರಾದ ಕೆ. ನಟರಾಜನ್ ಶುಕ್ರವಾರ ಸಂಜೆ ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಆರೋಪಿ ತಿಂಗಳೊಳಗಾಗಿ 10 ಸಾವಿರ ದಂಡ ತುಂಬದಿದ್ದರೆ ಮತ್ತೊಂದು ವರ್ಷ ಸಾದಾ ಸಜೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಏನಿದು ಪ್ರಕರಣ?: ತಾಲೂಕಿನ ಅಮ್ಮಿನಬಾವಿಯ 9 ವರ್ಷದ ಬಾಲಕಿ ಮೇಲೆ ಕಳೆದ ಜ.5ರಂದು ಶಿವಪ್ಪ ಮಾದರ ಅತ್ಯಾಚಾರ ನಡೆಸಿದ್ದನು. ಬಾಲಕಿ ಕುಟುಂಬಕ್ಕೆ ಮುಂಚೆಯೇ ಪರಿಚಿತನಾಗಿದ್ದ ಶಿವಪ್ಪ, ಬಾಲಕಿ ಪಾಲಕರು ಹೊಲಕ್ಕೆ ಹೋದಾಗ ಬಾಲಕಿ ಕೈ ಹಾಗೂ ಬಾಯಲ್ಲಿ ಬಟ್ಟೆ ಹಾಕಿ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ. ಬಾಲಕಿ ಗೆಳತಿ ಮನೆಗೆ ಬಂದು ನೋಡಿದಾಗಲೇ ಈ ವಿಷಯ ಗೊತ್ತಾಗಿ ನಂತರ ಧಾರವಾಡ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಾರನೇ ದಿನವೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.