ಕಠಿಣ ಶಿಕ್ಷೆಯಿಂದ ಅತ್ಯಾಚಾರ ಪ್ರಕರಣ ಕಡಿಮೆ
ಕನ್ನಡಪ್ರಭ ವಾರ್ತ, ಧಾರವಾಡ, ಜೂ. 29
ಮಕ್ಕಳ ರಕ್ಷಣೆ ಮತ್ತು ಮಾರಾಟ ಕುರಿತಂತೆ ಇಲ್ಲಿನ ಖಾಸಗಿ ಹೊಟೇಲ್ವೊಂದರಲ್ಲಿ ಮಕ್ಕಳ ಹಕ್ಕು ರಕ್ಷಣಾ ಆಯೋಗ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಸಮಾಲೋಚನಾ ಸಭೆಯನ್ನು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದ 9 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿಗೆ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿರುವುದು ಸಂತಸದ ಸಂಗತಿ. ಇದೇ ರೀತಿ ಎಲ್ಲೆಡೆ ನಡೆಯುವ ಮಕ್ಕಳ ಮೇಲಿನ ನಡೆಯುವ ಅತ್ಯಚಾರ ಅನ್ಯಾಯಗಳನ್ನು ನಡೆಸುವ ಆರೋಪಿಗಳಿಗೆ ಇಂತಹ ಕಠಿಣ ಶಿಕ್ಷೆ ವಿಧಿಸಬೇಕು. ಅಂದಾಗ ಮಾತ್ರ ಅತ್ಯಾಚಾರದಂತಹ ಪ್ರಕರಣಗಳು ಕಡೆಮೆಯಾಗುತ್ತವೆ ಎಂದರು.
ಸಮಾಲೋಚನಾ ಸಭೆಯಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಿಲ್ಲೆಯ ಅನೇಕ ಸಮಸ್ಯೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಸಂಗ್ರಹಿಸುವ ಮೂಲಕ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಕಾರ್ಯವಾಗಬೇಕು. ಅಲ್ಲದೇ, ಮಕ್ಕಳಿಗೆ ಸೂಕ್ತ ರಕ್ಷಣೆ ನೀಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ಸಲಹೆ ನೀಡಿದರು.
ಪರಿವರ್ತನೆ ಅಗತ್ಯ: ಎಸ್ಪಿ ರವಿಕುಮಾರ ಮಾತನಾಡಿ, ಮಕ್ಕಳು ದೇಶದ ಸಂಪತ್ತು. ಆದರೆ, ಕೆಲ ಪಾಲಕರು ಮಕ್ಕಳನ್ನು ದುಡಿಮೆಗಾಗಿ ಬಳಸುವ ಪ್ರವೃತ್ತಿ ಹೊಂದಿದ್ದಾರೆ. ಅಂತಹ ಪಾಲಕರ ಮನಸ್ಥಿತಿಯನ್ನು ಪರಿವರ್ತನೆಗೊಳಿಸುವ ಕೆಲಸ ಮಾಡುವ ಮೂಲಕ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಉಮೇಶ ಆರಾಧ್ಯ ಹಾಗೂ ಸಂಘಟಕರಾದ ಮಕ್ಕಳ ರಕ್ಷಣಾಧಿಕಾರಿ ಬಿ. ಉಷಾ ಮಾತನಾಡಿದರು. ಡಾ. ಬಿ.ಎಸ್. ಅನುರಾಧಾ, ಬಿ. ಶಿವರಾಜೆಗೌಡ, ವನಿತಾ ತೋರವಿ, ವೆಂಕಟೇಶ ನಾಯಕ, ಯು. ಬಸವರಾಜ ಸೇರಿದಂತೆ ಅನೇಕರು ಇದ್ದರು. ನಿಂಗಪ್ಪ ಮಡಿವಾಳರ ನಿರೂಪಿಸಿದರು. ಟಿ.ಎಸ್. ಅಪ್ಪಣ್ಣವರ ಸ್ವಾಗತಿಸಿದರು. ಭಾರತಿ ಶೆಟ್ಟರ್ ವಂದಿಸಿದರು.
ಸಹಕಾರ ಬೇಕು: ನಂತರ ನಡೆದ ಸಮಾಲೋಚನಾ ಸಭೆಯಲ್ಲಿ ಮಕ್ಕಳನ್ನು ದುಡಿಮೆಯಿಂದ ದೂರವಿಡುವ ನಿಟ್ಟಿನಲ್ಲಿ ಕಾರ್ಯ, ಮಕ್ಕಳ ಹಕ್ಕು ರಕ್ಷಣೆ, ಮಕ್ಕಳ ಮಾರಟಗಳ ಕುರಿತು ಚರ್ಚೆಗಳು ನಡೆದವು. ಅಲ್ಲದೇ, ಅನ್ಯ ರಾಜ್ಯದ ಮತ್ತು ಜಿಲ್ಲೆಯ ಮಕ್ಕಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಿಡಬ್ಲುಸಿಗೆ ಸಾಗಿಸುವಾಗ ಮಕ್ಕಳ ಪೊಲೀಸ್ ಘಟಕ ಸರಿಯಾದ ರೀತಿಯಲ್ಲಿ ಸ್ಪಂದಿಸುವುದಿಲ್ಲ ಎಂಬ ಆರೋಪಗಳು ಸಮಾಲೋಚನೆಯಲ್ಲಿ ಭಾಗವಹಿಸಿದ ಸದಸ್ಯರಿಂದ ಹೆಚ್ಚು ಕೇಳಿಬರುತ್ತಿದ್ದವು. ಬೇರೆ ರಾಜ್ಯ ಅಥವಾ ಜಿಲ್ಲೆಯಿಂದ ತಪ್ಪಿಸಿಕೊಂಡು ಬಂದ ಮಕ್ಕಳನ್ನು ಸಂರಕ್ಷಿಸಿ ಅವರ ಸ್ವಂತ ಊರುಗಳಿಗೆ ಕಳುಹಿಸುವಾಗ ಅಲ್ಲಿಯ ಸಿಡಬ್ಲುಸಿಯವರು ಸರಿಯಾದ ರೀತಿಯಲ್ಲಿ ಸ್ಪಂದನೆ ಹಾಗೂ ಸಹಕಾರ ನೀಡುತ್ತಿಲ್ಲ. ಇದರಿಂದ ಮಕ್ಕಳ ಸಂರಕ್ಷಣೆಯಲ್ಲಿ ತೊಂದರೆಯಾಗುತ್ತಿದೆ. ಈ ಕುರಿತು ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಸಿಡಿಪಿಒಗಳು ಸಭೆಯಲ್ಲಿ ಪ್ರತಿಧ್ವನಿಸಿದರು.
ಅಮ್ಮಿನಭಾವಿಯಲ್ಲಿ ನಡೆದ 9 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿಗೆ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿರುವುದು ಸಂತಸದ ಸಂಗತಿ. ಇದೇ ರೀತಿ ಎಲ್ಲೆಡೆ ನಡೆಯುವ ಮಕ್ಕಳ ಮೇಲಿನ ನಡೆಯುವ ಅತ್ಯಚಾರ ಅನ್ಯಾಯಗಳನ್ನು ನಡೆಸುವ ಆರೋಪಿಗಳಿಗೆ ಇಂತಹ ಕಠಿಣ ಶಿಕ್ಷೆ ವಿಧಿಸಬೇಕು.
- ಸಮೀರ ಶುಕ್ಲಾ, ಜಿಲ್ಲಾಧಿಕಾರಿ