ಫಲಿಮಾರು ಮಠದಿಂದ ಮಹಾಭಾರತ ಕನ್ನಡಕ್ಕೆ ಅನುವಾದ: ವೆಂಕಟೇಶಾಚಾರ್ಯ
ಕ.ಪ್ರ. ವಾರ್ತೆ , ಹುಬ್ಬಳ್ಳಿ , ಜೂ.30
500 ವರ್ಷಗಳ ಹಿಂದೆ ತುಳು ಭಾಷೆಯಲ್ಲಿ ಬರೆದಿರುವ ಮಹಾಭಾರತ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನು ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಫಲಿಮಾರು ಮಠ ಕೈಗೆತ್ತಿಕೊಂಡಿದೆ ಎಂದು ಪಂಡಿತ ಬಿ.ಎನ್. ವೆಂಕಟೇಶಾಚಾರ್ಯ ಹೇಳಿದರು.
ಭಾನುವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಪಂಚಮವೇದ ಎಂದು ಕರೆಸಿಕೊಳ್ಳುವ ಮಹಾಭಾರತ ಮಹಾಕಾವ್ಯವನ್ನು ಕನ್ನಡಕ್ಕೆ ಅನುವಾದಿಸಲಿದ್ದಾರೆ. ಫಲಿಮಾರು ಮಠದ ವಿದ್ಯಾಮಾನ್ಯ ತೀರ್ಥರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ನೂರು ಸಂಪುಟಗಳ ಕನ್ನಡಾನುವಾದದ ಮಹಾಭಾರತ ಕಾವ್ಯ ಬಿಡುಗಡೆ ಮಾಡಲಾಗುವುದು ಎಂದರು.
ನೂರು ಸಂಪುಟಗಳಲ್ಲಿ ಇಡೀ ಮಹಾಭಾರತ ಕಾವ್ಯವನ್ನು ಕನ್ನಡಕ್ಕೆ ತರುವ ಕೆಲಸ ಈಗಾಗಲೇ ಆರಂಭವಾಗಿದ್ದು, ಈ ಯೋಜನೆಗೆ ಮಠದಿಂದ 10 ಕೋಟಿ ವೆಚ್ಚ ಮಾಡಲಾಗುತ್ತಿದೆ. ನೂರು ಸಂಪುಟಗಳ ಮಹಾಭಾರತ ಕಾವ್ಯದ ಬೆಲೆಯನ್ನು 20 ಸಾವಿರಕ್ಕೆ ನಿಗದಿ ಮಾಡಲಾಗಿದ್ದು, ಪ್ರಕಟಣಾ ಪೂರ್ವ ದರವಾಗಿ 15 ಸಾವಿರ ನಿಗದಿ ಮಾಡಲಾಗಿದೆ. ಮಹಾಭಾರತ ಕಾವ್ಯ ಅಭಿಯಾನದ ನಿರ್ವಾಹಕ ಎಂದು ಪಂಡಿತ ಸಮೀರಾಚಾರ್ಯ ಕಂಠಪಲ್ಲಿ ಅವರನ್ನು ಫಲಿಮಾರು ಮಠಾಧೀಶ ವಿದ್ಯಾಧೀಶ ಶ್ರೀಪಾದಂಗಳವರು ನೇಮಕ ಮಾಡಿದ್ದು, ದೇಶದ ವಿವಿಧೆಡೆ ಫಲಿಮಾರು ಮಠ ಕೈಗೆತ್ತಿಕೊಂಡಿರುವ ಕನ್ನಡಾನುವಾದ ಕೈಂಕರ್ಯದ ಕುರಿತು ಪ್ರಚಾರ ಮಾಡಲಿದ್ದಾರೆ ಎಂದರು.
ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ದೆಹಲಿ ಸೇರಿದಂತೆ ದೇಶದ ಪ್ರಮುಖ ನೂರು ನಗರಗಳಲ್ಲಿ ಮಹಾಭಾರತ ಪ್ರಸಾರೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ರಸಾರೋತ್ಸವ ಅಂಗವಾಗಿ ಮಹಾಭಾರತದ ಉಪನ್ಯಾಸ, ಮಹಾಭಾರತದ ಮಹತ್ವ ಮತ್ತು ಅದರಲ್ಲಿನ ಜೀವನ ಮೌಲ್ಯಗಳ ಕುರಿತು ಉಪನ್ಯಾಸ ಮತ್ತು ಕಿರು ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು.
ಇಂದು ಪ್ರಸಾರೋತ್ಸವ ಉದ್ಘಾಟನೆ: ಮಹಾಭಾರತ ಶುದ್ಧ ಪಾಠ ಪ್ರಕಾಶನ ಪ್ರಸಾರೋತ್ಸವ ಉದ್ಘಾಟನೆ ಕಾರ್ಯಕ್ರಮ ಹುಬ್ಬಳ್ಳಿಯ ಭವಾನಿ ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜು.1ರಂದು ಸಂಜೆ 6ಕ್ಕೆ ಜರುಗಲಿದೆ. ವಿದ್ವಾನ್ ಕೊರ್ಲಹಳ್ಳಿ ನರಸಿಂಹಾಚಾರ್ಯ ಉದ್ಘಾಟಿಸಲಿದ್ದಾರೆ.