ಮಹಾಲನೋಬಿಸ್ ಯುವಕರಿಗೆ ಮಾದರಿ
ಹುಬ್ಬಳ್ಳಿ: ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಭಾರತದ ಹಿರಿಮೆಯನ್ನು ವಿಶ್ವಕ್ಕೆ ಬಿತ್ತರಿಸಿದ ಮಹಾನ್ ವ್ಯಕ್ತಿ ಪಿ.ಸಿ. ಮಹಾಲನೋಬಿಸ್ ಅವರ ಜೀವನ ಇಂದಿನ ಯುವಕರಿಗೆ ಮಾದರಿಯಾಗಬೇಕು ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಾರ್ಯಾಲಯದ ಉಪ ಮಹಾನಿರ್ದೇಶಕ ಪಿ.ವಿ.ಆರ್. ಪ್ರಸಾದ ಹೇಳಿದರು.
ನಗರದ ಎನ್‌ಎಸ್‌ಎಸ್‌ಓ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ಸಂಖ್ಯಾಶಾಸ್ತ್ರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ತರ ಭಾರತದ ಯೋಜನೆ ಹಾಗೂ ಸಂಖ್ಯಾಶಾಸ್ತ್ರದ ಬೆಳವಣಿಗೆಗೆ ಮಹಾಲನೋಬಿಸ್ ಅವರ ಕೊಡುಗೆ ಅಪಾರವಾದದ್ದು ಎಂದರು.
ಅತಿಥಿಯಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಡಾ.ವಿ.ಬಿ. ಜೋಶಿ ಹಾಗೂ ಕರ್ನಾಟಕ ಕಲಾ ಮಹಾವಿದ್ಯಾಲಯದ ಡಾ.ಎಂ.ಎನ್. ಮೆಗೇರಿ ಅವರು 'ಲೇಬರ್ ಆ್ಯಂಡ್ ಎಂಪ್ಲಾಯಮೆಂಟ್ ಸ್ಟ್ಯಾಟಿಸ್ಟಿಕ್ಸ್' ವಿಷಯ ಕುರಿತು ಪ್ರಬಂಧ ಮಂಡಿಸಿದರು.
ಎನ್‌ಎಸ್‌ಎಸ್‌ಓದ ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿ, ಗುಲ್ಬರ್ಗಾ, ಗೋವಾ ಕಚೇರಿಗಳ ಹಿರಿಯ ಅಧಿಕಾರಿಗಳು ಹಾಗೂ ಅವಳಿ ನಗರದ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಜರಿದ್ದರು. ಎಚ್.ಎಲ್. ಲಮಾಣಿ ಸ್ವಾಗತಿಸಿದರು. ಅನಿಲ ಕಾಖಂಡಕಿ ಪರಿಚಯಿಸಿದರು. ಪ್ರಮೋದ ಪಂಡಿತ ನಿರೂಪಿಸಿದರು. ಬಿ.ಎಸ್. ಭಂಗಿ ವಂದಿಸಿದರು.