ಸಂತ್ರಸ್ತರ ನಿಧಿ ಸಂಗ್ರಹಕ್ಕಾಗಿ 3ರಿಂದ ಕಲಾಕೃತಿ ಪ್ರದರ್ಶನ
ಕ.ಪ್ರ.ವಾರ್ತೆ , ಧಾರವಾಡ , ಜೂ. 30
ಉತ್ತರಾಖಂಡದಲ್ಲಿ ಉಂಟಾದ ಪ್ರವಾಹದಿಂದ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿದ್ದು ಅವರಿಗೆ ಸಾಧ್ಯವಾದಷ್ಟು ಆರ್ಥಿಕ ಸಹಾಯ ನೀಡುವ ದೃಷ್ಟಿಯಿಂದ ಧಾರವಾಡದ ಕಲಾಮಂಡಳ ಜು.3ರಿಂದ ವಿಶೇಷ ಕಲಾ ಪ್ರದರ್ಶನ ಹಮ್ಮಿಕೊಂಡಿದೆ.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಲಾಮಂಡಳ ಸಂಸ್ಥೆಯ ಕಾರ್ಯದರ್ಶಿ ಮಧು ದೇಸಾಯಿ, ಅತಂತ್ರ ಸ್ಥಿತಿಯಲ್ಲಿರುವ ಅಲ್ಲಿನ ಜನರಿಗೆ ಮಾನವೀಯ ದೃಷ್ಟಿಯಿಂದ ಸಹಕಾರ ನೀಡುವುದು ಎಲ್ಲರ ಕರ್ತವ್ಯ.
ಈ ನಿಟ್ಟಿನಲ್ಲಿ ಸಂಸ್ಥೆಯು ಜು.3ರಿಂದ 7ರವರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳ 50 ಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಮಾರಾಟದಿಂದ ಬಂದ ಹಣವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಲಾಗುವುದು. ಈ ಕಾರ್ಯಕ್ಕೆ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡದ ಲೈಯನ್ಸ್ ಕ್ಲಬ್ ಹಾಗೂ ಪ್ರದರ್ಶನ ನಡೆಯುವ ಮಯೂರ ಆದಿತ್ಯಾ ರೆಸಾರ್ಟ್ ಸಹಕಾರ ನೀಡಿವೆ ಎಂದರು.
ಪ್ರಖ್ಯಾತ ಕಲಾವಿದರ ಕೃತಿಗಳು: ರಾಷ್ಟ್ರದ ಪ್ರಖ್ಯಾತ ಕಲಾವಿದರಾದ ಗುಲ್ಬರ್ಗದ ವಿ.ಜಿ. ಅಂದಾನಿ, ಪುಣೆಯ ರಾಮಚಂದ್ರ ಕರಟಮಲ್, ಸತಾರಾದ ವಿಜಯಕುಮಾರ ದುಮ್ಮಲ ಸೇರಿದಂತೆ ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡದ ಅನೇಕ ಕಲಾವಿದರು ಈಗಾಗಲೇ ತಮ್ಮ ಕಲಾಕೃತಿಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಜು.3ರಂದು ಸಂಜೆ 5.30ಕ್ಕೆ ಮಯೂರ ರೆಸಾರ್ಟ್‌ನಲ್ಲಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ವಿನಯ ಕುಲಕರ್ಣಿ ಹಾಗೂ ಅರವಿಂದ ಬೆಲ್ಲದ ಭಾಗವಹಿಸುತ್ತಾರೆ ಎಂದರು.