ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಮಸ್ಯೆ ಎದುರಿಸದ ನಿಶ್ಯಕ್ತ ಸರ್ಕಾರ: ಜೋಶಿ

Mainashree
Updated On : 1 Jul 2013, 10:36 am

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 30
ದೇಶದಲ್ಲಿ ದಿನಕ್ಕೊಂದು ರೀತಿಯ ಸಮಸ್ಯೆಗಳು ತಲೆದೋರುತ್ತಿವೆ. ಬೆಲೆ ಏರಿಕೆ ತಡೆಯಲಾಗುತ್ತಿಲ್ಲ. ಕೇಂದ್ರದ ಕಾಂಗ್ರೆಸ್ ಸರ್ಕಾರ ಸಮಸ್ಯೆಗಳನ್ನು ಎದುರಿಸದ ನಿಶ್ಯಕ್ತ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಟೀಕೆ ಮಾಡಿದರು.
ಇಲ್ಲಿನ ರಪಾಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಹಾಗೂ ಪದಾಧಿಕಾರಿಗಳ ಘೋಷಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ದೇಶದ ಅಶಕ್ತ ರಾಜಕಾರಣದಿಂದ ಭದ್ರತೆ ಛಿದ್ರವಾಗಿದೆ. ಚೀನಾ ದೇಶದೊಳಗೆ ನುಸುಳುತ್ತಿದ್ದರೂ ಪ್ರಧಾನ ಮಂತ್ರಿಗಳು ಧ್ವನಿ ಎತ್ತುತ್ತಿಲ್ಲ ಎಂದು ಜೋಶಿ ಬೇಸರ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಮಾಜಿ ಪ್ರಧಾನಿ ಅವರನ್ನು ನೋಡಿ ಕಾಂಗ್ರೆಸ್ ಆಡಳಿತ ಮಾಡುವುದನ್ನು ಕಲಿಯಬೇಕು. ಒಂದು ವೇಳೆ ಅಟಲಜೀ ಅವರ ಅಭಿಪ್ರಾಯದಂತೆ ದೇಶದ ಎಲ್ಲ ನದಿಗಳ ಜೋಡಣೆ ಆಗಿದ್ದರೆ ಇಂದು ಉತ್ತರಾಖಂಡದಲ್ಲಿ ಜಲಪ್ರಳಯ ಆಗುತ್ತಿರಲಿಲ್ಲ ಎಂದರು.
ಯಾವುದೇ ಪಕ್ಷಕ್ಕೆ ಆ ಪಕ್ಷದ ಕಾರ್ಯಕರ್ತರೇ ಬೆನ್ನೆಲುಬಾಗಿದ್ದು, ಅವರೇ ಸಂಘಟನೆ ಶಕ್ತಿ ಇದ್ದಂತೆ. ರಾಜಕಾರಣ ಕೆಟ್ಟದ್ದು ಎಂದು ಭಾವಿಸಿದರೆ ಅದು ಮತ್ತಷ್ಟು ಕೆಟ್ಟದಾಗಿಯೇ ಕಾಣುತ್ತದೆ. ಆದ್ದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು. ಹೊಸ ವಿಚಾರಗಳನ್ನು ಪಕ್ಷಕ್ಕೆ ನೀಡಬೇಕು ಎಂದರು.
ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ರಾಜಕಾರಣಿಗಳು ಜನಸಾಮಾನ್ಯರಂತೆ ವರ್ತಿಸುವ ಅವಶ್ಯಕತೆ ಇದೆ. ಅಧಿಕಾರ ದೊರೆತ ತಕ್ಷಣ ಜನಸಾಮಾನ್ಯರ ಮೇಲೆ ಅಧಿಕಾರ ಚಲಾಯಿಸಲು ಮುಂದಾಗಬಾರದು. ಸಾಮಾನ್ಯ ವ್ಯಕ್ತಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಓರ್ವ ರಾಜಕಾರಣಿ ಎಲ್ಲರ ಮೆಚ್ಚುಗೆ ಪಡೆಯುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಪಶ್ಚಿಮ ಕ್ಷೇತ್ರದ ಅಧ್ಯಕ್ಷರನ್ನಾಗಿ ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಮೋಹನ ರಾಮದುರ್ಗ ಮತ್ತು ಹನುಮಂತ ಹರಣಗಿ ಅವರನ್ನು ನೇಮಕ ಮಾಡಲಾಯಿತು. ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ಸಿ. ಸವಡಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸಂಜಯ ಕಪಟಕರ, ಶಂಕರ ಶೇಳಕೆ, ಮಾಜಿ ಸದಸ್ಯ ಪ್ರಕಾಶ ಗೋಡಬೊಲೆ, ಸುರೇಶ ಬೇದರೆ, ವೆಂಕಟೇಶ ಹುಬ್ಬಳ್ಳಿ, ಮಲ್ಲಿಕಾರ್ಜುನ ಸಾಹುಕಾರ, ದತ್ತಾ ಡೋರ್ಲೆ, ರಂಗಾ ಬದ್ದಿ ಇದ್ದರು. ಶೋಭಾ ಸವಡಿ ಸ್ವಾಗತಿಸಿದರು. ಮೋಹನ ರಾಮದುರ್ಗ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement