ಸುದ್ದಿ ಸಂಕ್ಷೇಪ
ಯುವತಿ ಅಪಹರಣ: ದೂರು
ಹುಬ್ಬಳ್ಳಿ: ಆಫೀಸ್ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಯುವತಿಯೊಬ್ಬಳನ್ನು ಅಪಹರಿಸಲಾಗಿದೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅರವಿಂದ ನಗರದ ಸ್ವಾತಿ (22) ಎಂಬ ಯುವತಿಯನ್ನು ಮಂಟೂರು ರಸ್ತೆ ನಿವಾಸಿ ಅಲ್ಬರ್ಟ್ ಎಂಬುವವ ಪುಸಲಾಯಿಸಿ ತನ್ನ ಮಗಳನ್ನು ಅಪಹರಿಸಿ ಬಚ್ಚಿಟ್ಟಿದ್ದಾನೆ ಎಂದು ಯುವತಿಯ ತಂದೆ ಜಯಂತ್ ಲಕ್ಷ್ಮಣ ಗಾಯಕವಾಡ ಅವರು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಹುಬ್ಬಳ್ಳಿ: ಜೂ. 24ರಂದು ಇಲ್ಲಿನ ಐಟಿ ಪಾರ್ಕ್ ಬಳಿ ರಾಜ್ಯ ರಸ್ತೆ ಸಾರಿಗೆ ಬಸ್ ಹಾಯ್ದು ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಅಪರಿಚಿತ ವ್ಯಕ್ತಿ ಭಾನುವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಕಳೆದ ಒಂದು ವಾರದಿಂದ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತ ಅಪರಿಚಿತ ವ್ಯಕ್ತಿಯ ಎಡಗೈ ಮೇಲೆ ಬಸವರಾಜ ಮತ್ತು ರೂಪಾದೇವಿ ಎಂದು ಹಚ್ಚೆ ಇದ್ದು, ಬಲಗೈ ಮೇಲೆ ಹನುಮಂತ ದೇವರ ಹಚ್ಚೆ ಇದೆ. ಈ ಕುರಿತು ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ: ಬಂಧನ
ಹುಬ್ಬಳ್ಳಿ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿರುವ ಕುರಿತು ಮಾತುಗಳು ಕೇಳಿ ಬರುತ್ತಿರುವ ಮಧ್ಯೆಯೇ ಭಾನುವಾರ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮಸ್ಥರು ಭಾನುವಾರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಭಾರಿ ಪ್ರತಿಭಟನೆ ಮಾಡಿದ್ದು, ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಕೆ. ಪಾಟೀಲ ಅವರು ಗ್ರಾಮಕ್ಕೆ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಬೆನ್ನ ಹಿಂದೆಯೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಎಲ್ಲರೂ ಕೋಳಿವಾಡ ಗ್ರಾಮದವರಾಗಿದ್ದು, ಅವರಿಂದ ಬಂಧನದ ವೇಳೆ ಹೆವರ್ಡ್ ಕಂಪನಿಯ 180 ಎಂ.ಎಲ್‌ನ 30 ಟೆಟ್ರಾ ಪಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಕೋಳಿವಾಡ ಗ್ರಾಮದ ದ್ಯಾಮಣ್ಣ ಹನುಮಂತಪ್ಪ ದೊಡಮನಿ, ಹಜರತ್ ಹಜರೆಸಾಬ್ ಮುಲ್ಲಾ, ಮಾಬುಸಾಬ್ ದಸ್ತಗೀರಸಾಬ್ ಹಳ್ಳಿಕೇರಿ ಎಂದು ಗುರುತಿಸಲಾಗಿದೆ.
ಟೈರ್ ಕಳ್ಳರ ಬಂಧನ
ಧಾರವಾಡ: ಲಾರಿ, ಟಿಪ್ಪರ್‌ಗಳ ಬ್ಯಾಟರಿ ಮತ್ತು ಟೈರ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಗ್ರಾಮೀಣ ಪೊಲೀಸರು ಭಾನುವಾರ ಮೂವರನ್ನು ಬಂಧಿಸಿದ್ದಾರೆ. ಅಳ್ನಾವರದ ಸಮೀರ ಹಜರತಲಿ ಧಾರವಾಡ, ಸೋಹೈಲ್ ಕಲಂದರ ಮುದ್ದೇಬಿಹಾಳ ಮತ್ತು ಆಷ್ಫಾಕ್ ಮೆಹಬೂಬಖಾನ ನದಾಫ್ ಎಂಬುವರೇ ಬಂಧಿತ ಆರೋಪಿಗಳು. ಇವರಿಂದ ಸುಮಾರು ರು. 1 ಲಕ್ಷ ಮೌಲ್ಯದ ಎಂಟು ವಾಹನಗಳ ಬ್ಯಾಟರಿ, ಮೂರು ಟೈರ್‌ಗಳು ಮತ್ತು ಒಂದು ಜಾಕ್ ವಶಪಡಿಸಿಕೊಳ್ಳಲಾಗಿದೆ.