ನೀರಿಗಾಗಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಧಾರವಾಡ: ಬೇಸಿಗೆ ಬಂತೆಂದರೆ ಸಾಕು, ನೀರಿಗೆ ಹಾಹಾಕಾರ ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ ವರ್ಷಪೂರ್ತಿ ಕುಡಿಯುವ ನೀರಿನ ಸಮಸ್ಯೆ. ತಮ್ಮೂರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೇಳಿ ಬೇಸತ್ತ ಗ್ರಾಮಸ್ಥರು ಶುಕ್ರವಾರ ಕೈಯಲ್ಲಿ ಬಿಂದಿಗೆ ಹಿಡಿದು ಹೋರಾಟಕ್ಕೆ ಇಳಿದು ಬಿಟ್ಟರು. ತಾಲೂಕಿನ ಕ್ಯಾರಕೊಪ್ಪದಲ್ಲಿ ಕೊಳವೆ ಬಾವಿ ದುರಸ್ತಿ ಇದ್ದ ಕಾರಣ ಕಳೆದ 10 ದಿನಗಳಿಂದ ನೀರು ಬಂದಿಲ್ಲ. ಕೊಳವೆ ಬಾವಿ ಇದ್ದಾಗಲೂ ನೀರಿನ ಸಮಸ್ಯೆ ಅನುಭವಿಸುತ್ತಿದ್ದ ಜನತೆಗೆ ಈಗ ತೀವ್ರ ಸಂಕಟವಾಗಿದ್ದು, ಪ್ರತಿಭಟನೆಗೆ ನಿಂತರು. ಜಿಲ್ಲಾ ಕೇಂದ್ರ ಧಾರವಾಡದಿಂದ ಬರೀ 10 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಇಷ್ಟೊಂದು ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಇತ್ತ ಯಾರ ಗಮನ ಹರಿಯದಿರುವುದು ದುರಂತದ ಸಂಗತಿ. ಇದರಿಂದಾಗಿ ಬೇಸತ್ತು ಶುಕ್ರವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆಂದು ಹೇಳಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಯಿತು. ಪ್ರತಿಭಟನೆಯಲ್ಲಿ ಗ್ರಾಮದ ರಘು ದೊಡವಾಡ, ನಾಗರಾಜ ತಳಿಹಾಳ, ಪ್ರಕಾಶ ಪೂಜಾರ, ದುದ್ದಸಾಬ ದೊಡವಾಡ, ಬಸವರಾಜ ಮುನವಳ್ಳಿ ಇದ್ದರು.