ಶಾಮಿಯಾನ ಫಕ್ಕೀರಪ್ಪ ರಾಜಕೀಯದಲ್ಲೂ ಮುಂದಪ್ಪಾ
ಹುಬ್ಬಳ್ಳಿ: ಮದುವೆ, ಮುಂಜಿಯಂತಹ ಶುಭ ಕಾರ್ಯಗಳಿಗೆ ಶಾಮಿಯಾನ್ ಹಾಕುತ್ತಾ ಸಾಗಿದ ಫಕ್ಕೀರಪ್ಪ ತಟ್ಟಿಮನಿ ಅವರಿಗೆ ಜನ ಸಂಪರ್ಕ ಬೆಳೆಯುತ್ತಾ ಹೋಯಿತು. ತರುವಾಯ ಸಮಾಜ ಸೇವಾ ಕಾರ್ಯವೂ ಶುರುವಾಯಿತು. ಹೀಗೆ ಜನರಿಗೆ ಬೇಕಾದ ವ್ಯಕ್ತಿಯಾದ ಫಕ್ಕೀರಪ್ಪ ಅವರನ್ನು ಜನರೇ ರಾಜಕೀಯಕ್ಕೆ ಕರೆ ತಂದರು. ಈಗ ಅವರು ಹು-ಧಾ ಪಾಲಿಕೆಯ ಚುನಾವಣೆಗೆ 31ನೇ ವಾರ್ಡ್‌ನ ಕೆಜೆಪಿ ಅಭ್ಯರ್ಥಿ.
ಫಕ್ಕೀರಪ್ಪ ಅವರು 'ಸ್ವಾಗತ' ಶಾಮಿಯಾನ್ ಉದ್ಯೋಗ ಆರಂಭಿಸಿದರು. ಎಲ್ಲ ಶುಭ ಕಾರ್ಯಗಳಿಗೆ ಶಾಮಿಯಾನ್ ಇಲ್ಲದೇ ಆಗುವುದಿಲ್ಲ. ಹೀಗಾಗಿ ಫಕ್ಕೀರಪ್ಪ ಈ ಉದ್ಯೋಗದಿಂದಾಗಿಯೇ ಎಲ್ಲರಿಗೂ ಚಿರಪರಿಚಿತವಾಗುತ್ತಾ ಹೋದರು. ಎಲ್ಲರಿಗೂ ಬೇಕಾದ ವ್ಯಕ್ತಿಯೆಂಬ ಕಾರಣಕ್ಕೆ ಜನ ತಮ್ಮ ಕೆಲಸ ಕಾರ್ಯ ಹೇಳಿಕೊಂಡು ಸಾಗಿದರು. ರೇಷನ್ ಕಾರ್ಡ್, ಆಧಾರ ಕಾರ್ಡ್, ಸಂಧ್ಯಾ ಸುರಕ್ಷಾ, ವಿಧವಾ ವೇತನ ಇಂತಹ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯಿಲ್ಲದವರಿಗೆ ಮಾಹಿತಿಕೊಟ್ಟು ಅದರ ಲಾಭ ಫಲಾನುಭವಿಗಳಿಗೆ ಕೊಡಿಸುವಲ್ಲಿ ನೆರವಾದರು. ಸಾರ್ವಜನಿಕ ಗಣೇಶೋತ್ಸವದಂತಹ ಕಾರ್ಯಕ್ರಮಗಳಿಗೆ, ಬಡ ಬಗ್ಗರ ಸಮಾರಂಭಕ್ಕೆ ಉಚಿತವಾಗಿ ಶಾಮಿಯಾನ್ ಹಾಕಿಸಿದರು. ಹೀಗಾಗಿ ಫಕ್ಕೀರಪ್ಪ ಅವರೇ ತಮ್ಮ ವಾರ್ಡ್‌ನ ಸದಸ್ಯರಾದಲ್ಲಿ ಸಮಸ್ಯೆ ದೂರವಾಗುತ್ತದೆ, ತಮ್ಮ ನೆರವಿಗೂ ಬರುತ್ತಾರೆಂದು ಯೋಚಿಸಿ ಜನರು ಅವರನ್ನು ರಾಜಕೀಯಕ್ಕೆ ಕರೆ ತಂದರು. ಪ್ರಸ್ತುತ ಕೆಜೆಪಿಯಿಂದ ವಾರ್ಡ್ ನಂ. 31ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಫಕ್ಕೀರಪ್ಪ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಯಡಿಯೂರಪ್ಪನವರು ರಾಜ್ಯಕ್ಕೆ ನೀಡಿರುವ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಹಾಗೂ ತಮ್ಮ ಸಂಪರ್ಕ ಶಕ್ತಿ ಬಳಸಿಕೊಂಡು ಜಯದ ಲೆಕ್ಕಾಚಾರ ಹಾಕುತ್ತಿದ್ದಾರೆ. ವಾರ್ಡ್ ನಂ. 31ರಲ್ಲಿ ವಾಳ್ವೇಕರ ಪ್ಲಾಟ್, ಅರಿಹಂತನಗರ ಜೇಮ್ಸ್‌ಲ್ಯಾಂಡ್‌ನಂತಹ ಹಿಂದುಳಿದ ಪ್ರದೇಶಗಳಿದ್ದು ಸಮಸ್ಯೆ ಹೊದ್ದು ಮಲಗಿವೆ, ಜತೆಗೆ ಹೇಮಂತನಗರ, ಯುರೇಕಾ ಕಾಲನಿ, ಭುವನೇಶ್ವರಿ ನಗರ, ಸುಭಾಸ ನಗರ, ಮಧುರಾ ಕಾಲನಿ, ಶಬರಿ ನಗರ, ಆಕಾಶ ಪಾರ್ಕ್‌ನಂತಹ ಪ್ರಜ್ಞಾವಂತ ಮತದಾರರ ಬಡಾವಣೆಯೂ ಇದ್ದರೂ ಅಭಿವೃದ್ಧಿ ಕಾರ್ಯ ಮರೀಚಿಕೆಯಾಗಿದೆ. ಇವೆಲ್ಲವನ್ನೂ ಸರಿಪಡಿಸಬೇಕು, ಸಾರ್ವಜನಿಕ ಸೌಲಭ್ಯ ಎಲ್ಲರಿಗೂ ಸಿಗುವಂತೆ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದಾರೆ ಫಕ್ಕೀರಪ್ಪ.
ಕನ್ನಡಪ್ರಭದೊಂದಿಗೆ ಮಾತನಾಡಿದ ಫಕ್ಕೀರಪ್ಪ, ಜಾತಿ, ಮತ ಭೇದ ಮರೆತು ಎಲ್ಲರಿಗೂ ನನ್ನಿಂದಾದ ಸಹಾಯ ಮಾಡಿದ್ದೇನೆ. ರಾಜಕೀಯ ಅಧಿಕಾರವಿದ್ದಲ್ಲಿ ಮತ್ತಷ್ಟು ಕಾರ್ಯ ಕೈಗೊಳ್ಳಲು ಸಾಧ್ಯ ಎಂಬ ಇಚ್ಛೆಯಿಂದ ಜನರೇ ರಾಜಕೀಯಕ್ಕೆ ಕರೆ ತಂದಿದ್ದಾರೆ. ಎಲ್ಲ ಸಮಾಜದೊಂದಿಗೆ ಬೆರೆತಿರುವ ನಾನು ಎಲ್ಲರಿಗೂ ಪರಿಪೂರ್ಣ ನ್ಯಾಯ ನೀಡಬೇಕೆಂದು ಬಯಸಿದ್ದೇನೆ. ವಾರ್ಡ್‌ನ್ನು ಸ್ವರ್ಗ ಮಾಡುತ್ತೇನೆಂದು ನಾನು ಹೇಳುವುದಿಲ್ಲ, ಆದರೆ, ಎಲ್ಲರಿಗೂ ಕನಿಷ್ಠ ಮೂಲ ಸೌಕರ್ಯ ನೀಡುವ ಉತ್ಕಟ ಇಚ್ಛೆ ಹೊಂದಿದ್ದೇನೆ. ವಾರ್ಡ್‌ನಲ್ಲಿ ಹೇಳಿಕೊಳ್ಳಲಾರದಷ್ಟು ಸಮಸ್ಯೆಗಳಿಗೆ ಅವುಗಳನ್ನು ಸರಿಪಡಿಸುವುದಕ್ಕೆ ಪ್ರಥಮ ಆದ್ಯತೆ ನೀಡುತ್ತೇನೆ ಎಂದರು.
ಬಿಜೆಪಿ ವಿರೋಧಿ ಅಲೆ: ಬಿಜೆಪಿ ವಿರುದ್ಧದ ಅಲೆ ನನ್ನ ಗೆಲುವಿಗೆ ದಾರಿಯಾಗಲಿದೆ. ಯಡಿಯೂರಪ್ಪನವರು ನೀಡಿರುವ ಜನಪರ ಆಡಳಿತವನ್ನು ಜನರಿಗೆ ಮನನ ಮಾಡಿಸುತ್ತೇನೆ. ಅದರಲ್ಲಿಯೂ ಹು-ಧಾಕ್ಕೆ ಯಡಿಯೂರಪ್ಪ ನೀಡಿರುವ ಕೊಡುಗೆಯ ಬಗ್ಗೆ ಜನರಿಗೆ ತಿಳಿಸುತ್ತೇನೆ. ಪಕ್ಷೇತರವಾಗಿ ಕಣಕ್ಕಿಳಿದಿದ್ದ ಪ್ರಕಾಶ ಮಿಸ್ಕಿನ್, ವಸಂತ ಬಿಳಿಯೆಲಿ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲುವು ನನ್ನ ಪರವಾಗಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದರು.