1.77 ಕೋಟಿ ಅರ್ಜಿ ಸಕಾಲಕ್ಕೆ ವಿಲೇವಾರಿ: ಶಾಲಿನಿ
ಕ.ಪ್ರ. ವಾರ್ತೆ ಧಾರವಾಡ ಮಾ. 2
2012ರ ಏಪ್ರಿಲ್ನಲ್ಲಿ ರಾಜ್ಯದಲ್ಲಿ ಸಕಾಲ ಯೋಜನೆ ಜಾರಿಯಾಗಿದ್ದು, ಈವರೆಗೆ 1.80 ಕೋಟಿ ಅರ್ಜಿ ದಾಖಲಾಗಿ, 1.77 ಕೋಟಿ ಅರ್ಜಿಗಳ ವಿಲೇವಾರಿಯಾಗಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕಾಲ ಅನುಷ್ಠಾನದ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಪೈಕಿ ಶೇ.2.15ರಷ್ಟು ಅರ್ಜಿಗಳು ವಿಳಂಬವಾಗಿವೆ. ಪೊಲೀಸ್ ಇಲಾಖೆ ಮತ್ತು ಅಟಲ್ಜಿ ಜನಸ್ನೇಹಿ ಕೇಂದ್ರಗಳಲ್ಲೇ ವಿಳಂಬ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಸಕಾಲ ಜಾರಿಯಲ್ಲಿ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ದೇಶದ 12 ರಾಜ್ಯಗಳಲ್ಲಿ ಸಕಾಲ ಜಾರಿಯಲ್ಲಿದ್ದು, ನಮ್ಮಲ್ಲಿರುವ ಮಾಹಿತಿ ತಂತ್ರಜ್ಞಾನದ ಸಹಕಾರದಿಂದ 265 ಸೇವೆಗಳನ್ನು ನೀಡಲಾಗುತ್ತಿದೆ ಎಂದರು.
ಧಾರವಾಡ ಪ್ರಥಮ: ಫೆಬ್ರವರಿ ತಿಂಗಳಲ್ಲಿ ರಾಜ್ಯದಲ್ಲಿಯೇ ಧಾರವಾಡ ಜಿಲ್ಲೆ ಸಕಾಲ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಶೇ. 99.5ರಷ್ಟು ನಿಗದಿತ ಅವಧಿಯಲ್ಲಿ ನಾಗರಿಕರಿಗೆ ಸೇವೆ ಒದಗಿಸಲಾಗಿದೆ. ಜಿಲ್ಲಾಡಳಿತ, ಜಿಪಂ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮವೇ ಇದಕ್ಕೆ ಕಾರಣ. ಜನವರಿಯಲ್ಲಿ 13ನೇ ಸ್ಥಾನದಲ್ಲಿದ್ದ ಧಾರವಾಡ ಈಗ ಪ್ರಥಮ ಸ್ಥಾನದಲ್ಲಿದ್ದು, ಇದೇ ಸ್ಥಾನವನ್ನು ಮುಂದೆಯೂ ಕಾಯ್ದುಕೊಂಡು ಹೋಗಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಕಾಲದಲ್ಲಿ ಕೊನೆ ಸ್ಥಾನ ಯಾದಗಿರಿ ಜಿಲ್ಲೆ ಪಡೆದುಕೊಂಡಿದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.