ಜನಪ್ರತಿನಿಧಿ ಜನರ ಸಮಸ್ಯೆಗೆ ಸ್ಪಂದಿಸಬೇಕು
ಧಾರವಾಡ: ಸ್ಥಳೀಯ ಸಂಸ್ಥೆ ಚುನಾವಣೆಗೆ ಇನ್ನೂ ಕೆಲವೇ ದಿನ ಬಾಕಿ ಉಳಿದಿವೆ. ಈ ಸಂದರ್ಭ ಹು-ಧಾ ಮಹಾನಗರ ಪಾಲಿಕೆಗೆ ಎಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಹಾಗೂ ಆಯ್ಕೆಗೊಂಡ ಪ್ರತಿನಿಧಿಗಳ ವ್ಯಕ್ತಿತ್ವ ಹೇಗಿರಬೇಕು ಎಂಬುದರ ಬಗ್ಗೆ ಧಾರವಾಡದ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹಲವಾರು ಸಲಹೆ ನೀಡಿದ್ದಾರೆ.
ಸಜ್ಜನ: ಮತದಾರರು ಆಯ್ಕೆ ಮಾಡುವ ವ್ಯಕ್ತಿ ಸಜ್ಜನನಾಗಿರಬೇಕು. ಮುಖ್ಯವಾಗಿ ಎಲ್ಲ ಸಮಯದಲ್ಲಿ ಜನರಿಗೆ ಲಭ್ಯವಾಗುವಂತಾಗಿರಬೇಕು. ಚುನಾವಣೆಯಲ್ಲಿ ಆಯ್ಕೆಗೊಳ್ಳುವ ಬಹುತೇಕ ಜನಪ್ರತಿನಿಧಿಗಳು ಜನರಿಗೆ ಸರಳವಾಗಿ ಕಾಣಿಸುವುದೇ ಇಲ್ಲ. ಇದರಿಂದ ಜನರು ತಮ್ಮ ಸಮಸ್ಯೆ ನಿವಾರಿಸಿಕೊಳ್ಳಲು ಪರದಾಡುವಂತಾಗುತ್ತದೆ.
ಮನೋಭಾವ: ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಜನಪ್ರತಿನಿಧಿಯದ್ದಾಗಿರಬೇಕು. ಜನಸಾಮಾನ್ಯರ ಸಮಸ್ಯೆಗೂ, ತನಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತ ಮನೋಭಾವ ಹೊಂದಿದ ಜನಪ್ರತಿನಿಧಿ, ಯೋಗ್ಯ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯನ್ನು ಚುನಾಯಿಸಿದ್ದಕ್ಕಾಗಿ ಜನರು ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ.
ನಿಷ್ಠುರತೆ: ಜನಪ್ರತಿನಿಧಿ ಕೆಲಸದಲ್ಲಿ ಸ್ಪಷ್ಟತೆ, ನಿಷ್ಠುರತೆ ಇರಬೇಕು. ಎಲ್ಲ ಕೆಲಸಗಳನ್ನು ಎಲ್ಲ ಜನಪ್ರತಿನಿಧಿಗಳಿಗೆ ಮಾಡಲು ಸಾಧ್ಯವಿಲ್ಲ. ಆದರೂ ಮಾಡುವ ಮನೋಭಾವ ಜನಪ್ರತಿನಿಧಿಗೆ ಇರಬೇಕು.
ನಡೆ-ನುಡಿ: ಚುನಾವಣೆ ಪೂರ್ವ ಅಭ್ಯರ್ಥಿಯಲ್ಲಿದ್ದ ಮನೋಸ್ಥಿತಿ, ನಡೆ-ನುಡಿ ಚುನಾವಣೆಯಲ್ಲಿ ಆಯ್ಕೆಗೊಂಡ ನಂತರ ಬದಲಾಗಬಾರದು. ಇಂತಹ ಬದಲಾವಣೆ ಸಾರ್ವಜನಿಕರಿಗೆ ತೋರಿದಲ್ಲಿ ತಾವು ಚುನಾಯಿಸಿದ ಜನಪ್ರತಿನಿಧಿ ಬಗ್ಗೆ ಅಸಹ್ಯ ಮೂಡುತ್ತದೆ.
ಪಾರದರ್ಶಕ: ವಾರ್ಡ್‌ಗಳಲ್ಲಿ ನಡೆಯುವ ಕಾಮಗಾರಿಗಳು ಪಾರದರ್ಶಕವಾಗಿರಬೇಕು. ಪರ್ಸೆಂಟೇಜ್ ವ್ಯವಹಾರ ಅಥವಾ ಅವ್ಯವಹಾರಕ್ಕೆ ಆಸ್ಪದ ಇರಬಾರದು. ಎಲ್ಲ ಕಾಮಗಾರಿಗಳ ವಿವರ ಜನಸಾಮಾನ್ಯರಿಗೆ ಸರಳ ಮತ್ತು ಸುಲಭವಾಗಿ ತಿಳಿಯುವಂತಿರಬೇಕು.
ವ್ಯಕ್ತಿತ್ವ: ಚುನಾವಣಾ ಕಣದಲ್ಲಿರುವ ವ್ಯಕ್ತಿಯ ವ್ಯಕ್ತಿತ್ವ ಅರಿತುಕೊಳ್ಳುವುದು ಅತ್ಯವಶ್ಯಕ. ಉತ್ತಮ ವ್ಯಕ್ತಿತ್ವ ಹೊಂದಿರದ ವ್ಯಕ್ತಿಯನ್ನು ಚುನಾಯಿಸಬಾರದು. ಸಚ್ಚಾರಿತ್ರ್ಯವುಳ್ಳವರನ್ನು ಆಯ್ಕೆ ಮಾಡಿದಲ್ಲಿ ವಾರ್ಡ್ ಸುಧಾರಣೆಯಾಗುತ್ತದೆ.
ಆಮಿಷ: ಮತದಾನದ ಸಂದರ್ಭ ಮತದಾರ ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಬಾರದು. ಪ್ರಾಮಾಣಿಕವಾಗಿ ಮತದಾನ ಮಾಡಬೇಕು. ಆಮಿಷ ತೋರಿಸುವ ಅಭ್ಯರ್ಥಿಗಳಿಂದ ದೂರ ಇರಬೇಕು. ಉತ್ತಮ ಅಭ್ಯರ್ಥಿಗಳನ್ನು ಹುಡುಕಿ ಪ್ರಾಮಾಣಿಕವಾಗಿ ಮತದಾನ ಮಾಡಬೇಕು.
ಕಲಾಪ: ಸಾಮಾನ್ಯ ಸಭೆಗಳಲ್ಲಿ ಅಸಭ್ಯ ವರ್ತನೆ ತೋರಬಾರದು. ಕಲಾಪಗಳಲ್ಲಿ ಚರ್ಚಿಸುವ ಸಂದರ್ಭ ಉತ್ತಮವಾಗಿ ವರ್ತಿಸಬೇಕು. ಮನಬಂದಂತೆ ಚೀರಾಡುವುದು, ಅನಾಗರಿಕ ವರ್ತನೆ ಮಾಡಬಾರದು.
ಮಾಧ್ಯಮಗಳ ಕಣ್ಣು: ಕಲಾಪವನ್ನು ಸಾರ್ವಜನಿಕರು ಮಾಧ್ಯಮಗಳ ಮೂಲಕ ಗಮನಿಸುತ್ತಿರುತ್ತಾರೆ ಎಂಬುದರ ಬಗ್ಗೆ ತಿಳಿದಿರಬೇಕು. ತಾವು ಚುನಾಯಿಸಿದ ವ್ಯಕ್ತಿಗಳು ಕಲಾಪದಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಕಂಡು ತಾವು ಚುನಾಯಿಸಿದವರ ಬಗ್ಗೆ ಜನರು ಬೇಸರ ಪಡುವಂತಾಗಬಾರದು.
ಸನ್ಮಾನ ಬೇಡ: ಚುನಾಯಿತಗೊಂಡ ನಂತರ ಜನಪ್ರತಿನಿಧಿಗಳು ಸನ್ಮಾನ ಮಾಡಿಸಿಕೊಳ್ಳುವುದರಲ್ಲಿಯೇ ಹೆಚ್ಚಿನ ಸಮಯ ಕಳೆಯಬಾರದು. ಇದೇ ಸಮಯವನ್ನು ಜನರ ಸಮಸ್ಯೆ ಅರಿಯುವುದಕ್ಕೆ ಮೀಸಲಿಡಬೇಕು. ಜನರೊಂದಿಗೆ ಬೆರೆಯಬೇಕು.
ಹೊಂದಾಣಿಕೆ: ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನರೊಂದಿಗೆ ಉತ್ತಮ ಹೊಂದಾಣಿಕೆ ಇಟ್ಟುಕೊಳ್ಳಬೇಕು. ತಾನೊಬ್ಬ ಚುನಾಯಿತ ಪ್ರತಿನಿಧಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ತನಗಿಂತ ಕೀಳು ಎಂಬ ಭಾವನೆ ಬೇಡ. ಎಲ್ಲವೂ ನನ್ನಿಂದ ಎಂಬ ಮನೋಭಾವ ತೆಗೆದುಹಾಕಿ, ನಮ್ಮಿಂದ ಎಂಬ ಭಾವನೆ ರೂಪಿಸಿಕೊಳ್ಳಬೇಕು.
ಆದರ್ಶ ಪಾಲಿಕೆ: ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಕೆಲಸ ಮಾಡಿದಾಗ ಮಾತ್ರ ನಗರ ಅಭಿವೃದ್ಧಿಗೊಳ್ಳುತ್ತದೆ. ಸ್ವಚ್ಛ, ಅಭಿವೃದ್ಧಿ ನಗರಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಅತಿ ಆವಶ್ಯಕ. ಅಂದಾಗ ಮಾತ್ರ ನಮ್ಮ ಪಾಲಿಕೆ ರಾಜ್ಯದಲ್ಲಿ ಉತ್ತಮ ಪಾಲಿಕೆಯಾಗಿ ಹೆಸರುಗಳಿಸಲು ಸಾಧ್ಯ.