'ಆಶಾ' ಭಾವನೆ ಕಳೆದುಕೊಂಡ ಕಾರ್ಯಕರ್ತೆಯರು!
ಕ.ಪ್ರ. ವಾರ್ತೆ ಧಾರವಾಡ ಮಾ. 3
ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರ ಆರೈಕೆ ಹಾಗೂ ಆರೋಗ್ಯ ಜಾಗೃತಿಗಾಗಿ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನದಲ್ಲಿ ಒಂದಿಷ್ಟು ಹೆಚ್ಚಳ ಮಾಡಿರುವ ಸರ್ಕಾರ, ನಿಗದಿತ ಗೌರವಧನ ನೀಡಬೇಕೆಂಬ ಒತ್ತಾಯಕ್ಕೆ ಯಾವುದೇ ಸೊಪ್ಪು ಹಾಕಿಲ್ಲ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ 30 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು ಗರ್ಭಿಣಿಯರನ್ನು ಹೆರಿಗೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ 200 ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನದಲ್ಲಿ ಒಂದಿಷ್ಟ್ಟು ಏರಿಕೆ ಮಾಡಿದೆ. ಗರ್ಭಿಣಿಯರ ಹೆರಿಗೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಡಿಸಿದರೆ 600 ಹಾಗೂ ತಾಲೂಕು ಇಲ್ಲವೇ ಜಿಲ್ಲಾ ಆಸ್ಪತ್ರೆಗಳಲ್ಲಿ ಅಥವಾ ಇನ್ನಿತರ ಆಸ್ಪತ್ರೆಗಳಲ್ಲಿ ಮಾಡಿಸಿದರೆ 400 ನೀಡುವ ಹೊಸ ಪ್ರಸ್ತಾವನೆ ಜಾರಿಗೆ ತಂದಿದೆ. ಈ ನೂತನ ಪ್ರೋತ್ಸಾಹ ಧನ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಕಡಿಮೆ ಪ್ರೋತ್ಸಾಹ ಧನದಿಂದ ಈಗಾಗಲೇ ಬಹುತೇಕ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಕೆಲಸದಿಂದ ವಿಮುಖರಾಗುತ್ತಿದ್ದರು. ಅಂತವರಿಗೆ ಹೆಚ್ಚಳಗೊಂಡಿರುವ ಪ್ರೋತ್ಸಾಹ ಧನ ಮನ ಬದಲಿಸುವಲ್ಲಿ ಒಂದಿಷ್ಟು ಸಹಕಾರಿಯಾಗಲಿದೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ನಿಗದಿತ ಗೌರವ ಧನ ನೀಡಬೇಕೆಂಬ ಒತ್ತಾಯಕ್ಕೆ ಸರ್ಕಾರ ಯಾವುದೇ ಸೊಪ್ಪು ಹಾಕಿಲ್ಲ. ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಜೊತೆಗೆ ನಿಗದಿತ ಗೌರವಧನ ನೀಡಲಾಗುತ್ತಿದೆ. ಸಿಕ್ಕಿಂ ಹಾಗೂ ಮೇಘಾಲಯದಲ್ಲಿ 3 ಸಾವಿರ, ಕೇರಳದಲ್ಲಿ ಹಬ್ಬಗಳ ಸಂದರ್ಭ ವಿಶೇಷ ಧನ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಯಾವುದೇ ರೀತಿಯ ಹೆಚ್ಚಿನ ಧನ ಸಹಾಯವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿಲ್ಲ.
ಆಶಾ ಕಾರ್ಯಕರ್ತೆಯರ ಕೆಲವೇನು?: ಗರ್ಭಿಣಿಯರ ದಾಖಲಾತಿ, ಗರ್ಭಿಣಿಯರ ಮತ್ತು ಮಕ್ಕಳ ಚುಚ್ಚುಮದ್ದು, ಗರ್ಭಿಣಿಯರಿಗೆ ಕಬ್ಬಿನಾಂಶವುಳ್ಳ ಮಾತ್ರೆ ವಿತರಣೆ, ಕಾಲಕಾಲಕ್ಕೆ ಗರ್ಭಿಣಿಯರ ವೈದ್ಯಕೀಯ ಪರೀಕ್ಷೆ, ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವಂತೆ ಗರ್ಭಿಣಿಯರಿಗೆ ತಿಳಿವಳಿಕೆ ಮೂಡಿಸುವುದು ಹಾಗೂ ಹೆರಿಗೆಗೆ ಆಸ್ಪತ್ರೆಗೆ ಕರೆದೊಯ್ಯುವುದು, ಬಾಣಂತಿಯರ ಆರೈಕೆ, ತಾಯಿ ಮತ್ತು ಮಗುವಿನ ವೈದ್ಯಕೀಯ ಪರೀಕ್ಷೆ, ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡುವುದು, ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳುವುದು ಸೇರಿದಂತೆ ಹಲವಾರು ಕಾರ್ಯಗಳಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಾರೆ.
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವ ವೇತನ ನಿಗದಿಪಡಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮಾಡುತ್ತ ಬಂದಿರುವ ಹೋರಾಟಕ್ಕೆ ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.
-ಆನಂದ ಅಂಗಡಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.