ಬೆಲೆ ಏರಿಸಿದ್ದೇ ಯುಪಿಎ ಸಾಧನೆ: ಅನಂತಕುಮಾರ ಲೇವಡಿ
ಕುಂದಗೋಳ: ದಿನಸಿ ವಸ್ತುಗಳ ಧಾರಣಿ ಹಾಗೂ ಇಂಧನಗಳಂತಹ ಬೆಲೆ ಗಗನಕ್ಕೇರಿಸಿ, ಭಯೋತ್ಪಾದನೆ ಬೆಂಬಲಿಸಿದ್ದೆ ಯುಪಿಎ ಸರ್ಕಾರದ ಸಾಧನೆ ಎಂದು ಕೇಂದ್ರ ಮಾಜಿ ಸಚಿವ ಅನಂತಕುಮಾರ ಲೇವಡಿ ಮಾಡಿದರು.
ಅವರು ಪಟ್ಟಣದ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದ ಪಪಂ ಚುನಾವಾಣೆಯ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡುತ್ತಾ, ರಾಜ್ಯ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಜೊತೆಗೆ ಜನಪ್ರಿಯ ಯೋಜನೆಗಳೊಂದಿಗೆ ಜನರಿಗೆ ಸಹಾಯ ಮಾಡುತ್ತಿದ್ದರೆ, ನಮ್ಮ ಪ್ರಧಾನಿ ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮೌನವಹಿಸಿರುವ ಅರ್ಥವೇನು ಎಂದು ಪ್ರಶ್ನಿಸಿದರು.
ಸಂಸದ ಪ್ರಹ್ಲಾದ್ ಜೋಷಿ ಮಾತನಾಡಿ, ಕುಂದಗೋಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದು, ಇಲ್ಲಿನ ಸವಾಯಿ ಗಂಧರ್ವ, ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ಅಭಿವೃದ್ಧಿ ಅಲ್ಲದೆ ಕುಂದಗೋಳ ಜನತೆಗೆ ದಿನದ 24 ಗಂಟೆಕಾಲ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆ ರೂಪಿಸಲಾಗಿದೆ ಎಂದರು.
ತಾಲೂಕಾಧ್ಯಕ್ಷ ಎನ್.ಎನ್. ಪಾಟೀಲ, ಜಿಪಂ ಅಧ್ಯಕ್ಷೆ ರತ್ನವ್ವ ಕಳ್ಳಿಮನಿ, ಮುಮತಾಜ ನದಾಫ, ನಿರ್ಮಲಾದೇವಿ ಉಪ್ಪಿನ, ಸಿ.ಎನ್. ಶ್ಯಾಗೋಟಿ, ಜಿಲ್ಲಾ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಬಸುರಾಜ ಕೊಪ್ಪದ, ರಾಜು ಮೊರಬದ ಇದ್ದರು. ಎ.ಬಿ. ಉಪ್ಪಿನ ನಿರೂಪಿಸಿದರು.