ಸ್ವಜಾತಿ ಮತದಾರರಿಂದ ಅಭ್ಯರ್ಥಿಗಳ ನಿದ್ರಾಭಂಗ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 5
ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದೆ ತಡ ವಿವಿಧ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ ಮಹಾನಗರ ಪಾಲಿಕೆ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಧುಮುಕಿರುವ ಸ್ಪರ್ಧಾಳುಗಳು, ಆಯಾ ವಾರ್ಡ್ಗಳಲ್ಲಿರುವ ಜಾತಿವಾರು ಮತದಾರರ ಅಂಕಿ-ಸಂಖ್ಯೆಗಳತ್ತ ಇದೀಗ ಕಣ್ಣು ನೆಟ್ಟಿದ್ದಾರೆ.
ಅವಳಿನಗರ ಒಟ್ಟು 67 ವಾರ್ಡ್ಗಳ ಪೈಕಿ ಪ್ರತಿಯೊಂದರಲ್ಲಿ ಸರಾಸರಿ 15ರಿಂದ 30 ಬೂತ್ಗಳು ಬರುತ್ತವೆ. ಪ್ರತಿಯೊಂದು ವಾರ್ಡ್ಗಳಲ್ಲಿ ಅಂದಾಜು 7-8 ಸಾವಿರ ಮತದಾರರಿದ್ದಾರೆ. ಪ್ರತಿಯೊಂದು ಬೂತ್ನಲ್ಲಿ ಸುಮಾರು 500-600 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಇದೇ ರೀತಿಯಾಗಿ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾರರು ವಾಸವಾಗಿದ್ದಾರೆ. ಈ ಕ್ಷೇತ್ರಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ಲೆಕ್ಕಾಚಾರದ ಮಾತುಗಳು ಚುರುಕುಗೊಂಡಿವೆ.
ಬಹಿರಂಗ ಪ್ರಚಾರಕ್ಕೆ ಅತ್ಯಂತ ಕಡಿಮೆ ಅವಧಿ ಲಭಿಸಿದ್ದರಿಂದ ತೀರಾ ಆಂತಕದಲ್ಲಿರುವ ಸ್ಪರ್ಧಾಳುಗಳು ಸಿಕ್ಕ ಅವಕಾಶದಲ್ಲೇ ವಾರ್ಡ್ನಲ್ಲಿ ಸುತ್ತಾಡಿ ಮತದಾರರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ಈ ಕಾರ್ಯ ಸ್ಪರ್ಧಾಳುಗಳಿಗೆ ತೃಪ್ತಿ ತಂದಿಲ್ಲ ಎಂಬುದು ಗಮನಾರ್ಹ.
ಜಾತಿ ಲೆಕ್ಕಾಚಾರ: ಬಿಜೆಪಿ, ಕಾಂಗ್ರೆಸ್, ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಸಾಕಷ್ಟು ಅಳೆದು ತೂಗಿಯೇ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ್ದಾರೆ ಎಂಬುದು ಮಂಗಳವಾರ ಇಡೀ ದಿನ ಅಭ್ಯರ್ಥಿಗಳು ಆಯಾ ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿರುವ ಮತದಾರರ ಜಾತಿವಾರು ಅಂಕಿ-ಸಂಖ್ಯೆ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದು ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ಇನ್ನೊಂದು ಮೂಲದ ಪ್ರಕಾರ, ಆಯಾ ವಾರ್ಡ್ಗಳಲ್ಲಿ ಉತ್ತಮ ಹಿಡಿತ ಸಾಧಿಸಿರುವ ಮತ್ತೆ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಾಜಿ ಸದಸ್ಯರುಗಳು, ತಮ್ಮ ಗೆಲುವಿಗೆ ಯಾವುದೊಂದು ಜಾತಿಯ ಅಭ್ಯರ್ಥಿ ಅಡ್ಡಿಯಾಗಬಹುದೆಂಬ ಮುಂದಾಲೋಚನೆಯಿಂದ ಪ್ರಬಲ ಅಭ್ಯರ್ಥಿಯ ಜಾತಿಯವರನ್ನೇ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರತಿಯೊಂದು ಬೂತ್ನಲ್ಲಿ ಆಯಾ ಜಾತಿ 50ಕ್ಕೂ ಹೆಚ್ಚು ಮತಗಳನ್ನು ಪ್ರಮುಖ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗಳು ಬಾಚಿಕೊಂಡರೇ, ಪ್ರಬಲ ಸ್ಪರ್ಧೆಯೊಡ್ಡಲಿರುವ ಅಭ್ಯರ್ಥಿಗೆ ಸಾಕಷ್ಟು ಮೈನಸ್ ಆಗುವುದರಲ್ಲಿ ನಿಸ್ಸಂಶಯ ಎಂದು ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ವಿಶ್ಲೇಷಣೆ. ಇನ್ನೂ ಕೆಲ ವಾರ್ಡ್ಗಳಲ್ಲಂತೂ ಒಂದೇ ಜಾತಿಗೆ ಸೇರಿದ ಮೂರ್ನಾಲ್ಕು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದು, ಇಂತಹ ವಾರ್ಡ್ಗಳಲ್ಲಿ ಯಾವ ಪಕ್ಷದ ಅಭ್ಯರ್ಥಿ ಜಯ ಸಾಧಿಸಲಿದ್ದಾನೆ ಎಂಬ ಲೆಕ್ಕಾಚಾರ ಹಾಕುವುದು ಅಭ್ಯರ್ಥಿಗಳಿಂದ ಹಿಡಿದು ಆಯಾ ಪಕ್ಷದ ನಾಯಕರಿಗೆ ಸಾಧ್ಯವಾಗುತ್ತಿಲ್ಲ.
ತಾವು ಈವರೆಗೂ ಬೆಂಬಲಿಸಿಕೊಂಡು ಪಕ್ಷ ಬೇರೆಯಾಗಿದೆ. ಆದರೆ, ಈ ಬಾರಿ ತಮ್ಮ ಸಂಬಂಧಿಯೇ ಚುನಾವಣಾ ಕಣದಲ್ಲಿರುವುದರಿಂದ ಈ ಬಾರಿ ಪಕ್ಷಕ್ಕಿಂತಲೂ ಸಂಬಂಧಕ್ಕೆ ಆದ್ಯತೆ ನೀಡಲೇಬೇಕಾಗುತ್ತದೆ ಎಂದು ವಾರ್ಡ್ ನಂ. 53ರ ಮತದಾರ ನಾಗರಾಜ ರಾಮಾಸಾ ಕಲಬುರ್ಗಿ ಎಂಬುವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂತಹದ್ದೇ ಅಭಿಪ್ರಾಯ ವಾರ್ಡ್ ನಂ. 52 ಹಾಗೂ ವಾರ್ಡ್ ನಂ. 44 ಸೇರಿದಂತೆ ಮತ್ತಿತರ ಕಡೆಗಳಲ್ಲಿನ ಮತದಾರರು ವ್ಯಕ್ತಪಡಿಸಿದ್ದು, ಇದರಿಂದಾಗಿ ಇಂತಹ ವಾರ್ಡ್ಗಳಲ್ಲಿ ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಗಳೇ ವಿಜಯಿಯಾಗಲಿದ್ದಾರೆ ಎಂದು ಈಗಲೇ ಹೇಳುವುದು ಅತ್ಯಂತ ಕಷ್ಟದ ಕೆಲಸವಾಗಿದೆ.
ಜಾತಿಯೇ ಅಡ್ಡಿ?: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಗೆಲುವಿಗೆ ಜಾತಿ ಮತಗಳು ಸಾಕಷ್ಟು ಅನುಕೂಲವಾಗಲಿವೆ ಎಂಬ ಲೆಕ್ಕಾಚಾರ, ಪ್ರಸಕ್ತ ಪಾಲಿಕೆ ಚುನಾವಣೆಯಲ್ಲಿ ತಲೆಕೆಳಗಾಗುವ ಲಕ್ಷಣಗಳು ಸ್ಪಷ್ಟವಾಗಲಾರಂಭಿಸಿದ್ದು, ತಮ್ಮ ಗೆಲುವಿಗೆ ಜಾತಿಯೇ ಎಲ್ಲಿ ಅಡ್ಡಿಯಾಗುವುದೋ ಎಂಬ ಆಂತಕ ಸ್ಪರ್ಧಾಳುಗಳ ಮನದಲ್ಲಿ ಮನೆ ಮಾಡಿದಂತೂ ಸುಳ್ಳಲ್ಲ.
ಆದ್ದರಿಂದ ಒಂದೇ ಜಾತಿಯ ಮೂರ್ನಾಲ್ಕು ಜನರು ಸ್ಪರ್ಧಿಸಿರುವ ವಾರ್ಡ್ಗಳಲ್ಲಿನ ಅಭ್ಯರ್ಥಿಗಳು, ಅನ್ಯ ಜಾತಿಯ ಮತದಾರರ ಮನವೊಲಿಸುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಕುಲಬಾಂಧವರ ಮತಗಳು ಕೈತಪ್ಪಿ ಹೋಗದಂತೆ ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ. ಅಭ್ಯರ್ಥಿ ಯಾರೇ ಆಗಿರಲಿ ತಮಗೆ ಮಾತ್ರ ಪಕ್ಷವೇ ಮುಖ್ಯ. ಪಕ್ಷದ ತತ್ವ ಸಿದ್ಧಾಂತ ಹಾಗೂ ರಾಷ್ಟ್ರ ಮಟ್ಟದ ನಾಯಕರನ್ನು ಗಮನದಲ್ಲಿಟ್ಟುಕೊಂಡು ಶೇ. 60ರಷ್ಟು ಮತದಾರರು ಪ್ರತಿಬಾರಿ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸುತ್ತ ಬಂದಿದ್ದಾರೆ. ಶೇ. 40ರಷ್ಟು ಜನತೆ ಆಯಾ ಕಾಲದಲ್ಲಿ ಆಯಾ ಪಕ್ಷಗಳಿಂದ ಆಗಿರುವ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಶೇಕಡಾವಾರು ಅಂಕಿ-ಅಂಶಗಳು ಅಷ್ಟೊಂದು ದೊಡ್ಡ ಮಟ್ಟದ ಪರಿಣಾಮ ಬೀರುವುದಿಲ್ಲವಾದರೂ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ಸ್ವಲ್ಪ ಮಟ್ಟಿಗಾದರೂ ಎಫೆಕ್ಟ್ ಮಾಡದೇ ಇರಲಾರವು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಈ ಎಲ್ಲ ಕಾರಣಗಳಿಂದಾಗಿಯೇ, ಸ್ವಜಾತಿ ಹಾಗೂ ಅನ್ಯ ಜಾತಿಯ ಮತದಾರರ ಮನವೊಲಿಸಿ ಗೆಲುವು ಸಾಧಿಸುವುದು ಯಾವುದೇ ಜಾತಿಯ ಅಭ್ಯರ್ಥಿಗಳು ಅಷ್ಟೊಂದು ಸುಲಭದ ಮಾತಲ್ಲ ಎಂದರೇ ತಪ್ಪಾಗಲಾರದು.
ಒಟ್ಟಾರೆ ಏನೇ ಇರಲಿ, ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಆಯಾ ಅಭ್ಯರ್ಥಿಗಳ ಮತಗಳು ಮಾತ್ರ ಹರಿದು ಹಂಚಿ ಹೋಗುವುದು ಬಹುತೇಕ ಖಚಿತವಾಗಿದ್ದು, ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಯಾವ್ಯಾವ ಅಭ್ಯರ್ಥಿಗಳಿಗೆ ಸ್ವಜಾತಿ ಮತಗಳು ಕೈಹಿಡಿದಿವೆ ಎಂಬುದು ಸ್ಪಷ್ಟವಾಗಲಿದೆ.
- ಬಿ.ಕೆ. ಮಹೇಂದ್ರ