ಅಂತೂ ಖಾತೆ ತೆರೆದ ಕೆಜೆಪಿ
ವಾರ್ಡ್ ನಂ. 50ರಲ್ಲಿ ಕೆಜೆಪಿ ಅಭ್ಯರ್ಥಿ ಲಕ್ಷ್ಮೀಬಾಯಿ ಬಿಜವಾಡ ಗೆಲುವು ಸಾಧಿಸುವ ಮೂಲಕ ಹು-ಧಾ ಮಹಾನಗರ ಪಾಲಿಕೆಯಲ್ಲಿ ಕೆಜೆಪಿ ತನ್ನ ಮೊದಲ ಖಾತೆ ತೆರೆದಂತಾಗಿದೆ. ಅವಳಿ ನಗರದ 67 ವಾರ್ಡ್ಗಳಲ್ಲಿ ಗೆಲುವು ಸಾಧಿಸಿರುವ ಏಕೈಕ ಕೆಜೆಪಿ ಅಭ್ಯರ್ಥಿ ಲಕ್ಷ್ಮೀಬಾಯಿ ಬಿಜವಾಡ. ಬಿಜೆಪಿಯ ನಾರಮ್ಮ ತಪೇಲಾ ಸೋಲುಂಡ ಸಮೀಪದ ಅಭ್ಯರ್ಥಿ. ಈ ಚುನಾವಣೆಯಲ್ಲಿ ಕೆಜೆಪಿ ಒಂದೇ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೂ, ಬಿಜೆಪಿ ಗೆಲುವಿನ ಓಟಕ್ಕೆ ಬ್ರೆಕ್ ಹಾಕುವಲ್ಲಂತೂ ಸಕ್ಸಸ್ ಆಗಿದೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಬೇಕೆಂಬ ಕೆಜೆಪಿಯ ಕುತಂತ್ರ ಅವಳಿ ನಗರದಲ್ಲಿ ಒಂದು ಹಂತದಲ್ಲಿ ಯಶಸ್ವಿಯಾದ್ದರೂ, ಬಿಜೆಪಿಯನ್ನು ಆಡಳಿತದಿಂದ ದೂರ ಸರಿಸುವಲ್ಲಿ ವಿಫಲವಾಯಿತು. ಇನ್ನೂ ವಾರ್ಡ್ 24 ಹಾಗೂ 63ರಲ್ಲಿ ಅಧಿಕೃತ ಬಿಜೆಪಿ ಅಭ್ಯರ್ಥಿಗಳಾದ ಶಾಂತಪ್ಪ ದೇವಕ್ಕಿ ಮತ್ತು ಮೋತಿಲಾಲ ಮಿಸ್ಕಿನ್ ಅವರನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಬಿಜೆಪಿಗೆ ಮತ್ತೊಂದು ಮುಖಭಂಗವಾದಂತಾಗಿದೆ. ಬಿಜೆಪಿ ಗೆಲ್ಲಬಹುದಾಗಿದ್ದ ಇನ್ನೂ ಮೂರು ಸ್ಥಾನಗಳನ್ನು ಇಬ್ಬರು ಪಕ್ಷೇತರರು ಹಾಗೂ ಒಬ್ಬ ಕೆಜೆಪಿ ಅಭ್ಯರ್ಥಿ ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೂಲಕ ಬಿಜೆಪಿಗೆ ನೇರವಾಗಿ ಟಾಂಗ್ ನೀಡಿದ್ದಾರೆ. ಈ ಮಧ್ಯೆ ಬಿಎಸ್ಸಾರ್ ಕಾಂಗ್ರೆಸ್ ಒಂದೇ ಒಂದು ಸ್ಥಾನದಲ್ಲಿಯೂ ಗೆಲವು ಸಾಧಿಸಿಲ್ಲ. ಅಷ್ಟೇ ಅಲ್ಲ ಪೈಪೋಟಿಯನ್ನೂ ಒಡ್ಡಿಲ್ಲ. ಎನ್ಸಿಪಿ ಹೇಳ ಹೆಸರಿಲ್ಲದಂತಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.