ಅಂತೂ ಶೆಟ್ಟರ್ ಪ್ರಚಾರ ಫಲಿಸಿತು ಬಿಜೆಪಿ ಮಾನ ಉಳೀತು
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವಳಿ ನಗರದ ಗಲ್ಲಿಗಲ್ಲಿ ಸುತ್ತಿ ಕೊನೆಗೂ ಮಾನ ಉಳಿಸಿಕೊಂಡರು! ಪಾಲಿಕೆ ಚುಕ್ಕಾಣಿಯನ್ನು ವಶಕ್ಕೆ ತೆಗೆದುಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರಿಂದ ಸ್ವತಃ ಮುಖ್ಯಮಂತ್ರಿಯವರೇ ವಾರ್ಡ್ಗಳಿಗೆ ಕಾಲಿಟ್ಟಿದ್ದರು. ಸ್ಪಷ್ಟ ಬಹುಮತಕ್ಕೆ ಇನ್ನೂ ಒಂದು ಸ್ಥಾನ ಕಡಿಮೆ ಇದ್ದರೂ ಬಿಜೆಪಿ ಪಡೆದ 33 ಸ್ಥಾನಗಳಿಂದ ಈ ಬಾರಿಯೂ ಪಾಲಿಕೆ ಬಿಜೆಪಿ ವಶವಾಗುವುದು ಖಚಿತ. ರಾಜ್ಯ ಬಿಜೆಪಿ ಸರ್ಕಾರ ಮಹಾನಗರ ಪಾಲಿಕೆಗೆ ಇದೇ ಮೊದಲ ಬಾರಿಗೆ ಎರಡು ಹಂತದಲ್ಲಿ ರು. 200 ಕೋಟಿ ಅನುದಾನ ಬಿಡುಗಡೆ ಮಾಡಿದ್ದಲ್ಲದೆ, ಹು-ಧಾ ಮುಖ್ಯಮಂತ್ರಿಯವರ ತವರೂರಾಗಿದ್ದರಿಂದ ಬಿಜೆಪಿ ಕನಿಷ್ಠ 40 ಸ್ಥಾನಗಳನ್ನಾದರೂ ಗೆಲ್ಲಲಿದೆಯೆಂದು ಲೆಕ್ಕಾಚಾರ ಹಾಕಲಾಗಿತ್ತು. ಕಳೆದ ಬಾರಿ 30 ಸ್ಥಾನದಲ್ಲಿ ಗೆದ್ದ ಬಿಜೆಪಿ, ಸಂ. ದಳದ 6 ಸದಸ್ಯರ ಬೆಂಬಲಿಗರೊಂದಿಗೆ ಆಡಳಿತ ನಡೆಸಿತ್ತು. ಕಳೆದ ಬಾರಿ ಸಂ. ದಳದಿಂದ ಗೆದ್ದಿದ್ದ ಆರೂ ಅಭ್ಯರ್ಥಿಗಳು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಹೀಗಾಗಿ ಬಿಜೆಪಿಗೆ 40ಕ್ಕಿಂತ ಹೆಚ್ಚಿನ ಸ್ಥಾನಗಳು ದೊರಕಲಿವೆ ಎಂಬ ಲೆಕ್ಕಾಚಾರ ಇತ್ತು. ಅದು ತಲೆ ಕೆಳಗಾಗಿದೆ. ಹರಸಾಹಸ ಮಾಡಿ ಬಿಜೆಪಿ ಗೆದ್ದಿರುವ 33 ಸ್ಥಾನಗಳು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಮಾನ ಕಾಪಾಡಿವೆಯಲ್ಲದೆ, ಭವಿಷ್ಯದಲ್ಲಿ ಆ ಪಕ್ಷಕ್ಕೆ ಎದುರಾಗಲಿರುವ ಅಡಚಣೆಯ ಎಚ್ಚರಿಕೆಯೂ ಈ ಫಲಿತಾಂಶದಿಂದ ದೊರೆತಂತಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.