ಪಕ್ಷೇತರ ಅಭ್ಯರ್ಥಿಯೇ ಕಿಂಗ್ ಮೇಕರ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 11
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪಕ್ಷೇತರ ಅಭ್ಯರ್ಥಿಯೇ 'ಕಿಂಗ್ ಮೇಕರ್' ಆಗಲಿದ್ದಾರೆ. ಸ್ಪಷ್ಟ ಬಹುಮತ ಪಡೆದುಕೊಳ್ಳುವಲ್ಲಿ ಓರ್ವ ಅಭ್ಯರ್ಥಿಯ ಕೊರತೆ ಬಿಜೆಪಿಗೆ ಎದುರಾಗಿದೆ. ಚಮತ್ಕಾರವೋ ಎನ್ನುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಹಿಂದಿನಷ್ಟೇ ಸ್ಥಾನಗಳಲ್ಲಿ ಜಯ ಗಳಿಸಿದೆ. ಕೆಜೆಪಿ ಖಾತೆ ತೆಗೆದಿದ್ದರೆ, ಪಕ್ಷೇತರಿಬ್ಬರಿಗೆ ವಿಜಯ ಲಕ್ಷ್ಮಿ ಒಲಿದಿದ್ದಾಳೆ. ಬಿಎಸ್ಆರ್, ಎನ್ಸಿಪಿ ಹೇಳ ಹೆಸರಿಲ್ಲದಂತಾಗಿದೆ.
ಪಾಲಿಕೆಯಲ್ಲಿ ಬಿಜೆಪಿ ಬಾವುಟ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರ ಚುಕ್ಕಾಣಿ ಯಾರು ಹಿಡಿಯಲಿದ್ದಾರೆಂಬ ಕುತೂಹಲಕ್ಕೆ ಸೋಮವಾರ ತೆರೆಬಿದ್ದಿದೆ. ನಿರೀಕ್ಷೆಯಂತೆ ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಪಾಲಿಕೆಯ ಒಟ್ಟು 67 ಸ್ಥಾನಗಳ ಪೈಕಿ 33 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅಧಿಕಾರಕ್ಕೆ ಬರಲು 34 ಸ್ಥಾನಗಳ ಸ್ಪಷ್ಟ ಬಹುಮತ ಬೇಕಿದೆ. ಈ ನಡುವೆ ಒಬ್ಬ ಅಭ್ಯರ್ಥಿಯ ಕೊರತೆ ಅನುಭವಿಸುತ್ತಿರುವ ಬಿಜೆಪಿ ತಮ್ಮದೇ ಪಕ್ಷದಿಂದ ಸಿಡಿದೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಮಲ್ಲಿಕಾರ್ಜುನ ಹೊರಕೇರಿ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಇದೇ ವೇಳೆ ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಮಕ್ತುಮಹುಸೇನ್ ಯರಗಟ್ಟಿ ಅವರನ್ನೂ ಸೆಳೆಯುವ ಪ್ರಯತ್ನ ಮಾಡಲಿದೆ. ತನ್ಮೂಲಕ ಪಾಲಿಕೆಯ ಗದ್ದುಗೆ ಏರಲು ಬಿಜೆಪಿ ಮುಂದಾಗಿದೆ.
ಏರಿಳಿಯದ ಕೈ-ಜೆಡಿಎಸ್: ಇನ್ನು ಎರಡನೇ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರ ಹೊಮ್ಮಿದೆ. ಕಳೆದ ಬಾರಿ ಕಾಂಗ್ರೆಸ್ 22 ಸ್ಥಾನಗಳಲ್ಲಿ ಆಯ್ಕೆಯಾಗಿತ್ತು ಈ ಬಾರಿಯೂ 22 ಸ್ಥಾನಗಳಿಗೆ ಕಾಂಗ್ರೆಸ್ ತೃಪ್ತಿ ಪಡಬೇಕಾಗಿದೆ. ಒಂದಂಕಿಯೂ ಅತ್ತಿತ್ತ ದಾಟದ ಕಾಂಗ್ರೆಸ್ನಲ್ಲಿ ಕೆಲ ಹೊಸ ಮುಖಗಳು ಆಯ್ಕೆಯಾಗಿವೆ. ಆದರೆ ಅಧಿಕಾರದ ಸನಿಹ ಬರುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಳೆದ ಬಾರಿ ಇದ್ದಷ್ಟೂ ಸ್ಥಾನ ಉಳಿಸಿಕೊಂಡಿರುವ ನೆಮ್ಮದಿಯಿದೆ. ಜೆಡಿಎಸ್ ವಿಷಯಕ್ಕೆ ಬಂದಾಗಲೂ ಕಳೆದ ಬಾರಿಯಂತೆ 9 ಸ್ಥಾನಕ್ಕೇ ತೃಪ್ತಿ ಪಡಬೇಕಾಗಿದೆ. ಜೆಡಿಎಸ್ನಿಂದ ಕೆಲ ಹೊಸಬರು ಆಯ್ಕೆಯಾಗಿದ್ದು, ಹಳಬರು ಸೋಲನುಭವಿಸಿದ್ದಾರೆ. ಜೆಡಿಎಸ್ಗೆ ಹು-ಧಾದಲ್ಲಿ ನೆಲೆ ಇಲ್ಲ ಎನ್ನುತ್ತಿರುವಾಗಲೂ ಹಿಂದಿನ ಸ್ಥಾನ ಉಳಿಸಿಕೊಂಡಿದ್ದು ಸಾಧನೆಯೇ ಸರಿ.
ಕೆಜೆಪಿ ಖಾತೆ ಓಪನ್: ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಕೆಜೆಪಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತವರು ಕ್ಷೇತ್ರದಲ್ಲಿ ಮುಗ್ಗರಿಸಿದೆ. ಬಿಜೆಪಿ ತೊರೆದು ಕೆಜೆಪಿ ಸೇರಿದ್ದ ಹಿಂದಿನ ಸದಸ್ಯರಾಗಿದ್ದ ಅಶೋಕ ನಿಡವಣಿ, ರಾಜಶ್ರೀ ಜಡಿ, ಅಜ್ಜಪ್ಪ ಬೆಂಡಿಗೇರಿ, ವೆಂಕಟೇಶ ಮೇಸ್ತ್ರಿ, ಪುಷ್ಪಾ ಹೊಸಮನಿ ಸೋತು ಸುಣ್ಣವಾಗಿದ್ದಾರೆ. ಈ ನಡುವೆ ಲಕ್ಷ್ಮಿಬಾಯಿ ಬಿಜವಾಡ ಮಾತ್ರ ಕೆಜೆಪಿಯಿಂದ ಆಯ್ಕೆಯಾಗಿದ್ದಾರೆ. ಅದೂ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಅವರನ್ನು ಜಯದ ದಡ ಸೇರಿಸಿದೆ.
ಪಕ್ಷೇತರರೇ ನಿರ್ಣಾಯಕರು: ಆಟೋ ರಿಕ್ಷಾ ಗುರುತಿನ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ. ಮಲ್ಲಿಕಾರ್ಜುನ ಹೊರಕೇರಿ ಹಾಗೂ ಮಕ್ತುಮಹುಸೇನ್ ಯರಗಟ್ಟಿ ಗೆಲುವು ಸಾಧಿಸಿರುವವರು. ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಲು ಒಂದಂಕಿ ಹಿಂದೆ ಬಿದ್ದಿರುವುದರಿಂದ ಪಕ್ಷೇತರ ಅಭ್ಯರ್ಥಿಗಳಿಗೆ ಬೆಲೆ ಬಂದಂತಾಗಿದೆ. ಇವರೇ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕರು.
ಬಿಎಸ್ಆರ್, ಎನ್ಸಿಪಿ ಧೂಳಿಪಟ: ಬಳ್ಳಾರಿ ಗಣಿಧೂಳಿನಿಂದ ಹುಟ್ಟಿ ಬಂದ ಬಿಎಸ್ಆರ್ ಧೂಳಿಪಟವಾಗಿದೆ. ಗೆಲುವು ದೂರ ಉಳಿಯಿತು, ಕೊನೆ ಪಕ್ಷ 67 ವಾರ್ಡ್ಗಳ ಪೈಕಿ ಒಂದರಲ್ಲೂ ಎರಡನೇ ಸ್ಥಾನಕ್ಕೂ ಏರಲಾಗದ ಹೀನಾಯ ಸೋಲು ಬಿಎಸ್ಆರ್ ಅನುಭವಿಸಿದೆ. ಎನ್ಸಿಪಿ ಕಥೆಯೂ ಇದರು ಹೊರತಾಗಿರಲ್ಲ.
ಬಿಜೆಪಿಗೆ ಪ್ರಬಲ ಪೈಪೋಟಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಾದರೂ ಇನ್ನುಳಿದ ಪಕ್ಷಗಳು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿವೆ. ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿಯೇ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಕಳೆದ ಬಾರಿ ಬಿಜೆಪಿ 30 ಸ್ಥಾನಗಳಲ್ಲಿ ಆಯ್ಕೆಯಾಗಿತ್ತಾದರೂ ಜೆಡಿಯುನ 6 ಅಭ್ಯರ್ಥಿಗಳ ಬಲದಿಂದ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ತದನಂತರದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಯು ಸದಸ್ಯರು ಬಿಜೆಪಿ ಸೇರಿಕೊಂಡರು. ಹೀಗಿದ್ದಾಗ ಬಿಜೆಪಿ ಸಂಖ್ಯೆ 36 ಆಗಿತ್ತು. ಪ್ರಸ್ತುತ ಬಿಜೆಪಿ 33 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿಗಿಂತ 3 ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದೇವೆ ಎಂದು ಸಮಜಾಯಿಷಿ ಹೇಳಿಕೊಳ್ಳುತ್ತಿದೆ. ಸ್ವತಃ ಮುಖ್ಯಮಂತ್ರಿಯ ಬಲವಿದ್ದರೂ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಾಗದೇ ಹೆಣಗಾಡಿದೆ.
-ಪ್ರಕಾಶ ಎಸ್. ಶೇಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.