ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಧಿಕಾರದ ಗದ್ದುಗೆ ಏರುವ ಚಡಪಡಿಕೆ

Lingaraj Badiger
Updated On : 15 Mar 2013, 11:19 am

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು, ಫಲಿತಾಂಶವೂ ಬಂದದ್ದಾಯಿತು. ಈಗೇನಿದ್ದರೂ ಮೀಸಲಾತಿ ಪ್ರಕಟಗೊಳ್ಳುವುದಷ್ಟೇ ಬಾಕಿ.
ಹೌದು, ಮಹಾನಗರ ಪಾಲಿಕೆಗಳಿಗೆ ಮೇಯರ್ ಮತ್ತು ಉಪ ಮೇಯರ್, ಪಟ್ಟಣ ಪಂಚಾಯಿತಿ, ಪುರಸಭೆ, ತಾಲೂಕು ಪಂಚಾಯಿತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಗೊಳ್ಳುವುದನ್ನೇ ಚುನಾಯಿತ ಪ್ರತಿನಿಧಿಗಳು ಎದುರು ನೋಡುತ್ತಿದ್ದಾರೆ. ಅದರಲ್ಲಿಯೂ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿ, ಅಧಿಕಾರದ ಗದ್ದುಗೆಯಲ್ಲಿ ಕೂರಲು ಚಡಪಡಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಮೀಸಲಾತಿ ಪ್ರಕಟಗೊಳ್ಳುವುದರ ದಾರಿ ಕಾಯುವುದರ ಹೊರತಾಗಿ ಬೇರೆ ಕೆಲಸವೇ ಇಲ್ಲದಂತಾಗಿದೆ.
ಮುಂದಿನ ಒಂದು ವಾರದಿಂದ 40 ದಿನಗಳ ಅವಧಿಯ ಯಾವುದೇ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸುವ ಸಾಧ್ಯತೆ ಇದೆ. ಮೀಸಲಾತಿ ಪ್ರಕಟಗೊಂಡ ನಂತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಚಟುವಟಿಕೆ ಗರಿಗೆದರುತ್ತವೆ.
ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದ ಪಕ್ಷಗಳ ಸದಸ್ಯರಲ್ಲಿ ಮೀಸಲಾತಿಗೆ ಸಂಬಂಧಿಸಿದವರು ಮೇಯರ್ ಅಥವಾ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಮುಖಂಡರ ಮೇಲೆ ಒತ್ತಡ ಹೇರುವುದು ಹಾಗೂ ಮತ್ತಿತರ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತವೆ.
ಸರ್ಕಾರ ಮೀಸಲಾತಿ ಪ್ರಕಟಿಸಿದ ನಂತರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮೇಯರ್-ಉಪ ಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ದಿನಾಂಕ ಪ್ರಕಟಿಸುತ್ತಾರೆ. ನಿಗದಿತ ದಿನಾಂಕದವರೆಗೂ ಮೇಯರ್ ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಮ್ಮ ಪ್ರಯತ್ನ ಮುಂದುವರೆಸುವುದು ಪ್ರತಿ ವರ್ಷದ ಮಾಮೂಲಿ ಸಂಗತಿ.
ಇನ್ನೂ ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿಯಲು ಸಂಖ್ಯಾ ಬಲದ ಕೊರತೆ ಇರುವ ರಾಜಕೀಯ ಪಕ್ಷಗಳು, ಇನ್ನಿತರ ಪಕ್ಷಗಳ ಬೆಂಬಲದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವೂ ಈಗಾಗಲೇ ಪ್ರಾರಂಭಗೊಂಡಿದೆ. ಇದಕ್ಕಾಗಿ ಅಧಿಕಾರದ ಹೊಂದಾಣಿಕೆ ಹಾಗೂ ಮತ್ತಿತರ ಮಾತುಕತೆಗಳು ತೆರೆಮರೆಯಲ್ಲಿ ಚುರುಕು ಪಡೆದಿವೆ.
ಕೆಲವೆಡೆಯಂತೂ ಯಾವ ಮೀಸಲಾತಿ ಪ್ರಕಟಗೊಂಡರೆ ಯಾರು ಮೇಯರ್ ಅಥವಾ ಅಧ್ಯಕ್ಷ ಸ್ಥಾನದಲ್ಲಿ ಆಸೀನರಾಗಬೇಕೆಂಬ ತೀರ್ಮಾನಗಳೂ ಒಳಗೊಳಗೇ ಆಗಿಹೋಗಿವೆ.
ಒಟ್ಟಿನಲ್ಲಿ ಮೇಯರ್ ಅಥವಾ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಗೊಳ್ಳುವವರೆಗೂ ಈ ರೀತಿಯ ಕನಸು ಕಾಣುವ ಹಾಗೂ ಆ ಕನಸುಗಳನ್ನು ನನಸಾಗಿಸುವ ಪ್ರಯತ್ನಗಳು ಮುಂದುವರಿಯುವುದು ಖಚಿತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement