ಪುರುಷ ಪ್ರಧಾನ ಧೋರಣೆ ಬದಲಾಗಲಿ
ಧಾರವಾಡ: ಪುರುಷ ಪ್ರಧಾನ ಧೋರಣೆ ಬದಲಾದಾಗ ಮಾತ್ರ ಮಹಿಳೆಯರು ನಿರ್ಭಯದಿಂದ ಇರಲು ಸಾಧ್ಯ ಎಂದು ಇಂಗ್ಲಿಷ್ ಪ್ರಾಧ್ಯಾಪಕಿ ಸಂಧ್ಯಾ ಕುಲಕರ್ಣಿ ಅಭಿಪ್ರಾಯಿಸಿದರು.
ಇಲ್ಲಿನ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಐಎಂಎಸ್ಸೆಸ್ ಸಂಘಟಿಸಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಗಳಲ್ಲಿ ತಾಯಿಯಿಂದ ಹಿಡಿದು ಎಲ್ಲರಲ್ಲೂ ಪುರುಷ ಪ್ರಧಾನ ಧೋರಣೆ ಆಳವಾಗಿ ಬೇರೂರಿದೆ. ಮದುವೆಯಾದ ಸಂದರ್ಭದಲ್ಲಿ ಹಿರಿಯರು ಆರ್ಶೀವಾದ ಮಾಡುವಾಗ ಗಂಡು ಮಗುವಿನ ತಾಯಿಯಾಗಮ್ಮ ಎಂಬ ಹಾರೈಕೆಯಿಂದ ಹಿಡಿದು ಪ್ರತಿ ಹಂತದಲ್ಲೂ ಗಂಡು ಪದ ಬಳಕೆಯಾಗುತ್ತದೆ. ಆದ್ದರಿಂದ ಮನೆಯಿಂದಲೇ ಧೋರಣೆಗಳು ಬದಲಾಗಬೇಕಿದೆ. ಅಂದಾಗ ಹೆಣ್ಣುಮಗಳು ಎಲ್ಲ ರೀತಿಯಲ್ಲೂ ಸರಿಸಮಾನಳು ಎನ್ನುವ ಮನಸ್ಥಿತಿ ಬರಲು ಸಾಧ್ಯ ಎಂದರು.
ಇತ್ತೀಚಿನ ಹೊಸ ಸವಾಲುಗಳಾದ ಚುಡಾಯಿಸುವಿಕೆ, ರ್ಯಾಗಿಂಗ್ ಹಾಗೂ ಅತ್ಯಾಚಾರದಂತಹ ಘಟನೆಗಳು ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗಿ ಕಾಡುತ್ತಿವೆ. ಸಮೂಹ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವ ಅಶ್ಲೀಲ ಚಲನಚಿತ್ರಗಳು ಯುವ ಜನರನ್ನು ತಪ್ಪು ದಾರಿಗೆಳೆಯುತ್ತಿವೆ. ಅಲ್ಲದೆ ಮಾಡಬಾರದಂತಹ ಕೆಲಸಗಳಿಗೆ ಪ್ರೇರೆಪಣೆ ನೀಡುತ್ತಿವೆ. ಇವುಗಳಿಗೆ ಸರ್ಕಾರ ಕಡಿವಾಣ ಹಾಕದಿದ್ದರೆ ಇನ್ನೂ ಹೆಚ್ಚಿನ ಅವಘಡಗಳಿಗೆ ಆಸ್ಪದ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಎಐಎಂಎಸ್ಸೆಸ್‌ನ ಜಿಲ್ಲಾ ಸಂಚಾಲಕಿ ಪ್ರಭಾವತಿ ಗೂಗಲ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಬೊಮ್ಮನಗೌಡರ್ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯ ಕೌದೆಣ್ಣವರ, ಆಶಾ ಮರ್ಶಿ, ಉಪನ್ಯಾಸಕಿ ಕೆ.ಎಚ್. ಪಾಟೀಲ್, ಶಿಲ್ಪಾ ಮಠದ ಇದ್ದರು.