ಬಹು ಗ್ರಾಮ ನೀರು ಯೋಜನೆ ಎಡವಟ್ಟು
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 16
ತಾಲೂಕಿನ ಕರಡಿಗುಡ್ಡ ಹಾಗೂ ಇತರೆ 13 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿ ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ಬಗ್ಗೆ ಅಪಸ್ವರ ಎದ್ದಿರುವುದಲ್ಲದೇ, ಯೋಜನೆ ಸಂಬಂಧ ರಚಿಸಿರುವ ಜಂಟಿ ಸಮಿತಿ ಸಹ ಅಪೂರ್ಣವಾಗಿದೆ, ಸಭೆಯ ನಡಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಮತ್ತಷ್ಟು ಆರೋಪಗಳು ಕೇಳಿ ಬರುತ್ತಿವೆ.
ಕರಡಿಗುಡ್ಡ, ಪುಡಕಲಕಟ್ಟಿ, ಕನಕೂರು, ಮರೇವಾಡ, ಮಾರಡಗಿ, ಅಮ್ಮಿನಬಾವಿ, ಉಪ್ಪಿನ ಬೆಟಗೇರಿ, ಹೆಬ್ಬಳ್ಳಿ ಮತ್ತು ಶಿವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಆರಂಭವಾದ ಮಹತ್ವಾಕಾಂಕ್ಷಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸರಿಯಾಗಿ ಕಾರ್ಯರೂಪಕ್ಕೆ ಬರದಿರುವುದು ದುರ್ದೈವದ ಸಂಗತಿ.
ಯೋಜನೆ ಸಂಬಂಧ ರಚನೆಯಾದ ಜಂಟಿ ಸಮಿತಿ ಸರ್ಕಾರದ ನಡಾವಳಿಯಂತಿಲ್ಲ, ಅಪೂರ್ಣವಾಗಿದೆ. 25 ಸದಸ್ಯರ ಸಮಿತಿಯಲ್ಲಿ 9 ಗ್ರಾಪಂ ಅಧ್ಯಕ್ಷರು, ಅದೇ ಗ್ರಾಪಂಯ 9 ಪಿಡಿಓಗಳು ಸದಸ್ಯರಾಗಿರುತ್ತಾರೆ. ಅಲ್ಲದೇ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ತಾಂತ್ರಿಕ ಸಮಾಲೋಚಕರು ಹಾಗೂ ಓರ್ವ ಎಂಜಿನಿಯರ್ ಸೇರಿದಂತೆ ಮೂರು ಜನ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಇರಬೇಕು. ಆದರೆ, ಈ ಸಮಿತಿಯಲ್ಲಿ ಇಲ್ಲಿಯವರೆಗೂ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರನ್ನು ನೇಮಿಸಿಲ್ಲ. ಅಲ್ಲದೇ, ಸಮಿತಿ ಕಚೇರಿ ಹೆಡ್ವರ್ಕ್ ಸ್ಥಾಪಿತವಾಗಿರುವ ಗ್ರಾಪಂನಲ್ಲಿಯೇ ಸಭೆ ಮಾಡಬೇಕೆಂಬ ನಿಯಮವಿದ್ದರೂ ಗಾಳಿಗೆ ತೂರಿ 2012ರ ಅಕ್ಟೋಬರ್ 31ರಂದು ಉಪ್ಪಿನ ಬೆಟಗೇರಿಯಲ್ಲಿ ಸಭೆ ನಡೆಸಲಾಯಿತು. ಅಲ್ಲದೇ, ಸಮಿತಿ ಠರಾವು ಇಲ್ಲದೇ ಬಿಲ್ಲನ್ನು ಪಾಸ್ ಮಾಡಲಾಗಿದೆ.
ಕೋರಂ ಇರದಿದ್ದರೂ ಸಭೆ: ಯೋಜನೆ ಆರಂಭವಾದಾಗಿನಿಂದ ಸುಮಾರು ಐದು ಸಮಿತಿ ಸಭೆಗಳು ನಡೆದಿವೆ. ನಿಯಮದ ಪ್ರಕಾರ ಪ್ರತಿ ಸಭೆಯ ಮೂರು ದಿನದೊಳಗೆ ಸಭೆಯ ನಡಾವಳಿ ಪ್ರತಿಯನ್ನು ಸಮಿತಿ ಸದಸ್ಯರಿಗೆ ನೀಡಬೇಕು. ಆದರೆ, ಈ ಸಭೆಯ ನಡಾವಳಿಗಳು ಯಾವ ಸದಸ್ಯರಿಗೂ ಅಧಿಕಾರಿಗಳು ನೀಡುತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಸಮಿತಿ ಸಭೆಯಲ್ಲಿ ಕೋರಂ ಭರ್ತಿ ಇಲ್ಲದಿದ್ದರೂ 2012ರ ಡಿಸೆಂಬರ್ 12ರಂದು ಸಭೆ ನಡೆಸಲಾಗಿದೆ. ಸಭೆ ನಂತರ ಸಭೆಗೆ ಬರದ ಗ್ರಾಪಂ ಅಧ್ಯಕ್ಷರುಗಳ ಮನೆಗೆ ಹೋಗಿ ಸಹಿ ಮಾಡಿಸಿಕೊಂಡು ಬರುವ ಪರಿಪಾಠ ಇಲ್ಲಿ ನಡೆದಿದೆ. ಇದರಿಂದ ಈ ಯೋಜನೆಗೆ ಗ್ರಾಮಸ್ಥರು ನೀಡಿದ ವಂತಿಕೆ ಹಣ ದುರುಪಯೋಗವಾಗುವ ಸಂಶಯ ಇದೆ. ಆದ್ದರಿಂದ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಡೆಸಲಾದ ಸಭೆ ಹಾಗೂ ಸಭೆಯಲ್ಲಿ ಕೋಟಿಗಟ್ಟಲೇ ಹಣವನ್ನು ಅನುಮೋದನೆ ಪಡೆದುಕೊಂಡಿರುವ ಕುರಿತಂತೆ ಅಮ್ಮಿನಬಾವಿ ಗ್ರಾಮ ಪಂಚಾಯ್ತಿ ಸದಸ್ಯ ಸುನೀಲ ಗುಡಿ ಎಂಬುವರು ಜಲ ನಿರ್ಮಲ ಯೋಜನೆ ಉಪ ಯೋಜನಾ ವ್ಯವಸ್ಥಾಪಕ ಎಸ್.ಜಿ. ಕೊರವರ ಸೇರಿದಂತೆ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಕಳೆದ 2012ರ ಡಿಸೆಂಬರ್ ತಿಂಗಳಲ್ಲಿಯೇ ದೂರು ಸಲ್ಲಿಸಿದ್ದಾರೆ. ಆದರೆ, ಎಸ್.ಜಿ. ಕೊರವರ ಅವರು ಇದಕ್ಕೆ ಯಾವ ಉತ್ತರವನ್ನು ಕೊಡದಿರುವುದು ಸೋಜಿಗವೇ ಸರಿ.
ಕಾಮಗಾರಿಯಲ್ಲೇನಾಗಿದೆ?: ಯೋಜನೆಗಾಗಿ ಎಲ್ಲ 14 ಗ್ರಾಮಗಳಿಗೆ ನೀರಿನ ಹೊಸ ಪೈಪಲೈನ್ ಹಾಕಬೇಕು. ಆದರೆ, ಹಳೇ ಪೈಪ್ಲೈನ್ ಇದ್ದ ಕಡೆ ಅದೂ ದುರಸ್ತಿಗೆ ಬಂದರೂ ಅಲ್ಲಿ ಪೈಪ್ಲೈನ್ ಹಾಕಿಲ್ಲ. ಮೂರು ಅಡಿ ತೆಗ್ಗು ತೆಗೆಯುವ ಬದಲು ಮೇಲ್ಪದರಿನಲ್ಲಿಯೇ ಕೆಲವೆಡೆ ಪೈಪ್ಲೈನ್ ಮಾಡಿದ್ದರಿಂದ ನೀರು ಸೋರಿಕೆಯಾಗಿ ಹೋಗುವ ಸಂಭವ ಜಾಸ್ತಿ. ಪೈಪ್ ಜೋಡಣೆ ವೇಳೆ ಸಾಕಷ್ಟು ಕಡೆ ಸೈಕಲ್ ಟ್ಯೂಬ್ ಕಟ್ಟಲಾಗಿದೆ. ಈ ರೀತಿಯ ಯೋಜನೆ ಕಾಮಗಾರಿ ನಡೆದರೆ ಮುಂದಿನ ದಿನಗಳಲ್ಲಿ ನೀರು ಸೋರಿಕೆಯಾಗಲಿದೆ. ಆದ್ದರಿಂದ ಕಾಮಗಾರಿ ಗುಣಮಟ್ಟದ್ದಾಗಬೇಕೆಂಬುದು ಜಂಟಿ ಸಮಿತಿ ಸದಸ್ಯರಾದ ಮರೇವಾಡ ಗ್ರಾಪಂ ಮಾಜಿ ಅಧ್ಯಕ್ಷ ಕುಶಾ ಕ್ಯಾರಕೊಪ್ಪ, ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷ, ಮಹೇಶ ಜೋಶಿ ಹಾಗೂ ಗ್ರಾಮಸ್ಥರ ಆಗ್ರಹ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.