ಸ್ತ್ರೀಯರಿಗೆ ಭದ್ರತೆ ರಹಿತ ಸಾಲ ಸಿಗಲಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 16
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಹೆಸರಿನಲ್ಲಿ ಆಸ್ತಿಗಳು ಇರುವುದು ಕಡಿಮೆ. ಹಾಗಾಗಿ ಮಹಿಳೆಯರಿಗೆ ಬ್ಯಾಂಕ್ಗಳಲ್ಲಿ ಸಾಲ ಸಿಗುವುದಿಲ್ಲ. ಬ್ಯಾಂಕ್ಗಳಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದ ಸಾಲ ನೀಡುವಂತಾಗಬೇಕೆಂದು ರಾಜಸ್ಥಾನದ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಹೇಳಿದರು.
ಶನಿವಾರ ಗದಗ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಏರ್ಪಡಿಸಿದ್ದ ಕೆ.ಎಚ್. ಪಾಟೀಲರ 89ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಸೃಜನಾತ್ಮಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ನಾನು ಹಲವು ವರ್ಷಗಳಿಂದ ಈ ಕುರಿತು ಹೋರಾಟ ಮಾಡುತ್ತಾ ಬಂದಿದ್ದೇನೆ. ದೇಶಾದ್ಯಂತ ಇಂದು ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಕೋಟ್ಯಂತರ ರುಪಾಯಿ ಉಳಿತಾಯ ಮಾಡುತ್ತಾರೆ. ಆದರೆ, ಅವರೇ ಮತ್ತೆ ಬ್ಯಾಂಕ್ಗೆ ಹೋಗಿ ಸಾಲ ಕೇಳಿದಲ್ಲಿ ಭದ್ರತೆ ನೆಪ ಹೇಳುತ್ತಾರೆ. ವೈಯಕ್ತಿಕವಾಗಿ ಬೆಳವಣಿಗೆ ಹೊಂದಬೇಕೆಂದು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಹಿನ್ನಡೆಯಾಗುತ್ತಿದೆ ಎಂದರು.
ಪಾಟೀಲರ ಆದರ್ಶ ದಾರಿದೀಪ: ದೇಶಾದ್ಯಂತ ಹೆಸರು ಮಾಡಿದ್ದ ಕೆ.ಎಚ್. ಪಾಟೀಲರು ನನ್ನನ್ನು ಮಗಳೆಂದೇ ಕರೆಯುತ್ತಿದ್ದರು. ನನಗೆ ರಾಜಕೀಯದ ವಿಷಯಗಳನ್ನು ತಿಳಿಸಿ ಹೇಳಿದ್ದರು. ಪಾಟೀಲರಿಂದು ನಮ್ಮ ಮಧ್ಯೆ ಇಲ್ಲದಿರಬಹುದು. ಆದರೆ, ಅವರ ಆದರ್ಶಗಳು ನಮಗೆ ದಾರಿದೀಪವಾಗಿವೆ ಎಂದರು.
ಯುವ ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್ ಮಾತನಾಡಿ, ನನ್ನ ರಾಜಕೀಯ ಜೀವನ ರೂಪಿಸಿದ್ದೇ ಕೆ.ಎಚ್. ಪಾಟೀಲರು. ಅವರ ಮಾರ್ಗದರ್ಶನದಲ್ಲಿಯೇ ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ನನ್ನ ರಾಜಕೀಯ ಜೀವನ ಆರಂಭಿಸಿದ್ದು, ಇದರಲ್ಲಿ ಯಶಸ್ಸು ಕಂಡಿದ್ದೇನೆ ಎಂದರು.
ಶುದ್ಧ ನೀರಿನ 100ನೇ ಘಟಕ: ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, 2011ರಲ್ಲಿ ನಾವು ಹಾಕಿಕೊಂಡ ಕಾರ್ಯಕ್ರಮದಂತೆ ಉತ್ತರ ಕರ್ನಾಟಕದಲ್ಲಿ 99 ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಿದ್ದು, ಶನಿವಾರ ನಮ್ಮ ತಂದೆಯವರ 89ನೇ ಜಯಂತ್ಯುತ್ಸವದಂದು 100ನೇ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವೇ ಒಪ್ಪಿ ಗದಗ ಮಾದರಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನೀರಿನ ಘಟಕ ಸ್ಥಾಪಿಸಲು ರು. 1,400 ಕೋಟಿ ಮೀಸಲಿಟ್ಟಿರುವುದು ಜನಪರ ಕಾಳಜಿಗೆ ಸಿಕ್ಕ ಮನ್ನಣೆ ಎಂದರು.
ವಿಪ ಮಾಜಿ ಸದಸ್ಯ ಎನ್. ತಿಪ್ಪಣ್ಣ ಮಾತನಾಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎಂ. ಹಿಂಡಸಗೇರಿ, ಮಾಜಿ ಶಾಸಕ ಜಿ.ಎಸ್. ಪಾಟೀಲ, ವಿ.ಕೆ. ಕುರುಡಗಿ, ಎಚ್.ಆರ್. ನಾಯಕ, ಕೆ.ಎಚ್. ಪಾಟೀಲ ಅಭಿಮಾನಿಗಳು ಹಾಜರಿದ್ದರು. ಜೆ.ಕೆ. ಜಮಾದಾರ ನಿರೂಪಿಸಿದರು. ಗುರಣ್ಣ ಬಳಗಾನೂರ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.