ಮತ್ತೆ ಮಹಾನಗರ ಪಾಲಿಕೆ ಚುಕ್ಕಾಣಿ ಬಿಜೆಪಿಗೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 17
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುಕ್ಕಾಣಿಯನ್ನು ಈ ಬಾರಿಯೂ ಬಿಜೆಪಿಯೇ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಭಾನುವಾರ ಮಧ್ಯಾಹ್ನ ನೆಹರು ಮೈದಾನದ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾಲಿಕೆ ಗದ್ದುಗೆ ಏರಲು 34ರ ಸಂಖ್ಯಾಬಲ ಅವಶ್ಯಕತೆ ಇದೆ. ಆದರೆ, ಸದ್ಯ ಬಿಜೆಪಿ ಬಳಿ 33 ಪಾಲಿಕೆ ಚುನಾಯಿತ ಸದಸ್ಯರು ಹಾಗೂ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಸದಸ್ಯರು ಸೇರಿದಂತೆ ಒಟ್ಟು 39 ಬಹುಮತದ ಸಂಖ್ಯೆಯಿದ್ದು ಯಾವುದೇ ಅಡ್ಡಿ ಆಂತಕವಿಲ್ಲದೇ ಕಳೆದ ಬಾರಿಯಂತೆಯೇ ಈ ಬಾರಿಯೂ ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದರು.
ಅವಳಿನಗರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ನೀಡಿದ ಕೊಡುಗೆ ಹಾಗೂ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರ ಪ್ರಭು ತಮ್ಮ ಪರವಾಗಿ ತೀರ್ಪು ನೀಡಿದ್ದಾರೆ ಎಂದೂ ಸಿಎಂ ಶೆಟ್ಟರ್ ಹೆಮ್ಮೆಯಿಂದ ನುಡಿದರು. ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಹೊರಕೇರಿ ಕೂಡ ಬಿಜೆಪಿಗೆ ಸಾಥ್ ನೀಡಲಿದ್ದು, ಈ ಬಾರಿ ಅವಳಿ ನಗರವನ್ನು ಮಾದರಿ ನಗರವನ್ನಾಗಿ ಮಾರ್ಪಡಿಸಿ ತೋರಿಸಲಾಗುವುದೆಂದರು.
ನಿರಾಕರಣೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರನ್ನು ಪುನಃ ಬಿಜೆಪಿಗೆ ಕರೆತರಲು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನಡೆಸುತ್ತಿರುವ ಸಂಧಾನ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸಲು ಸಿಎಂ ಶೆಟ್ಟರ್ ನಿರಾಕರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಂದ ತೂರಿ ಬಂದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಹೈಕಮಾಂಡ್ ಈ ಕುರಿತಂತೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದಷ್ಟೇ ಉತ್ತರಿಸಿದರು.