ಜಗಳ: ಓರ್ವನಿಗೆ ಗಂಭೀರ ಗಾಯ
ಹುಬ್ಬಳ್ಳಿ: ಸ್ನೇಹಿತರ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಹೊಡೆದಾಟ ಒಬ್ಬ ಗಂಭೀರ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ವಿದ್ಯಾನಗರದ ಬಿವಿಬಿ ಕಾಲೇಜ್ ಬಳಿ ನಡೆದಿದೆ. ಬಸವರಾಜ ನೀಲಣ್ಣವರ (21) ಎಂಬುವನೇ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಸವರಾಜ ಹಳೆಯ ಸ್ನೇಹಿತರೇ ಆದ ಕಿರಣ ಹಾಗೂ ನಿತ್ಯಾನಂದ ಎಂಬಿಬ್ಬರೇ ಹಲ್ಲೆ ನಡೆಸಿದವರಾಗಿದ್ದು, ಎಲ್ಲರೂ ಉಣಕಲ್ ಕೊರವಿ ಓಣಿ ನಿವಾಸಿಗಳಾಗಿದ್ದಾರೆ.
ಹಳೆಯ ಸ್ನೇಹಿತನಾಗಿದ್ದುಕೊಂಡು ಮಾತನಾಡುವುದನ್ನು ಬಿಟ್ಟಿದ್ದಕ್ಕೆ ಕೋಪಗೊಂಡ ಕಿರಣ ಹಾಗೂ ನಿತ್ಯಾನಂದ ಇಬ್ಬರು ಕೂಡಿಕೊಂಡು ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಬಸವರಾಜನ ಜತೆಗೆ ಜಗಳ ತೆಗೆದು ಕಾಲಿಗೆ ರಾಡ್‌ನಿಂದ ಹೊಡೆದಿದ್ದಾರೆನ್ನಲಾಗಿದೆ.
ಸುದ್ದಿ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿ ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಗಿರೀಶ ರೋಡಕರ್, ಗಾಯಾಳನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.