ವಿದ್ಯಾರ್ಥಿ ನಿಲಯ ಧ್ವಂಸ: ಖಂಡನೆ
ಧಾರವಾಡ: ಬಿಹಾರದ ಪಾಟ್ನಾದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೆಲ್ಫೇರ್ ವಿದ್ಯಾರ್ಥಿ ನಿಲಯವನ್ನು ಆರ್ಎಸ್ಎಸ್ ಹಾಗೂ ವಿಎಚ್ಪಿ ಕಾರ್ಯಕರ್ತರು ಧ್ವಂಸ ಮಾಡಿರುವುದನ್ನು ಖಂಡಿಸಿ ಇಲ್ಲಿನ ಸಮತಾ ಸೈನಿಕ ದಳ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಪಾಟ್ನಾದಲ್ಲಿ ಜನವರಿಯಲ್ಲಿ ನಡೆದ ಅಂಬೇಡ್ಕರ್ ವೆಲ್ಫೇರ್ ವಿದ್ಯಾರ್ಥಿ ನಿಲಯಕ್ಕೆ ಆರ್ಎಸ್ಎಸ್ ಮತ್ತು ವಿಎಚ್ಪಿ ಪ್ರತಿನಿಧಿಗಳು ನುಗ್ಗಿ ವಿದ್ಯಾರ್ಥಿಗಳ ಮೇರೆ ದೌರ್ಜನ್ಯ ಎಸಗಿದ್ದಾರೆ. ನಿಮ್ಮ ಹಿರಿಯರು ಮಾಡಿಕೊಂಡು ಬಂದಿರುವ ಚಾಕರಿಗಳನ್ನು ಮಾಡಬೇಕು. ನೀವು ಹುಟ್ಟಿರುವುದೇ ನಮ್ಮ ಸೇವೆಗಾಗಿ, ನೀವು ಓದಲಿಕ್ಕೆ ಅರ್ಹರಲ್ಲ ಎಂದು ನಿಂದಿಸಿ, ವಿದ್ಯಾರ್ಥಿ ನಿಲಯವನ್ನು ಬಾಂಬ್ಗಳಿಂದ ಧ್ವಂಸ ಮಾಡಿದ್ದಾರೆ. ಇಷ್ಟಾದರೂ ಬಿಹಾರ ಸರ್ಕಾರ ದಲಿತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಧ್ವಂಸವಾಗಿರುವ ವಿದ್ಯಾರ್ಥಿ ನಿಲಯವನ್ನು ಪುನಃ ನಿರ್ಮಿಸಿ ಈ ಕೃತ್ಯವೆಸಗಿದವರ ವಿರುದ್ಧ ಪಿಸಿಆರ್, ಅಟ್ರಾಸಿಟಿ ಮತ್ತು ಗೂಂಡಾಗಿರಿ ಮೊಕದ್ದಮೆ ದಾಖಲಿಸಿ, ಜಾಮೀನು ರಹಿತವಾಗಿ ಗಡಿಪಾರು ಮಾಡಬೇಕೆಂದು ಪ್ರತಿಭಟನಾಕಾರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಚಂದ್ರಶೇಖರ ದುಂದೂರ, ಹನುಮಂತ ಕಟ್ಟಿಮನಿ, ಮಲ್ಲಿಕಾರ್ಜುನ ಮಡಿವಾಳರ ಇದ್ದರು.
ನಾಳೆ ಶೋಭಾ ಕರಂದ್ಲಾಜೆ ಭೇಟಿ
ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರದ ಕೆಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯನ್ನು ಮಾ. 20ರಂದು ಸಂಜೆ 5ಕ್ಕೆ ಇಲ್ಲಿನ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಕರೆಯಲಾಗಿದೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಬಿ.ಆರ್.ಪಾಟೀಲ, ಮಾಜಿ ಶಾಸಕ ಡಾ.ಆರ್.ಬಿ. ಶಿರಿಯಣ್ಣವರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕರ್ತರ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೆಜೆಪಿ ಸಂಚಾಲಕ ಆನಂದ ಹವಳಕೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಉಚಿತ ಶಿಬಿರ
ಹುಬ್ಬಳ್ಳಿ: ನಗರದ ಜೀನಿಯಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಬೇಸಿಗೆಯ ವಿಶೇಷ ಉಚಿತ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಶಿಬಿರ ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಶಾಂತಲಾ ಭವನದಲ್ಲಿ ನಡೆಯಲಿದ್ದು, ಮಾಹಿತಿಗೆ ಮೊ: 98440 17243 ಸಂಪರ್ಕಿಸಲು ಕೋರಲಾಗಿದೆ.
22ರಂದು ವಾಹನ ಬಹಿರಂಗ ಹರಾಜು
ಹುಬ್ಬಳ್ಳಿ: ಅಬಕಾರಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ 5 ದ್ವಿಚಕ್ರ ವಾಹನ ಹಾಗೂ 1 ಅಟೋ ರಿಕ್ಷಾವನ್ನು ಮಾ. 22 ಮಧ್ಯಾಹ್ನ್ನ 11:30ಕ್ಕೆ ಕುಂದಗೋಳದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಬಹಿರಂಗ ಹರಾಜು ಹಾಕಲಾಗುವುದು. ಹೆಚ್ಚಿನ ಮಾಹಿತಿಗೆ ಹಾಗೂ ಷರತ್ತುಗಳ ಕುರಿತು ಅಬಕಾರಿ ಉಪ ಅಧೀಕ್ಷಕರು, ಧಾರವಾಡ ಉಪ ವಿಭಾಗ ಇವರನ್ನು ಸಂಪರ್ಕಿಸಬಹುದು.