ರೇಲ್ವೆ ಅಧಿಕಾರಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ, ಮನವಿ
ಹುಬ್ಬಳ್ಳಿ: ರೇಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇನೆ ಎಂದು ಮನೆಗೆಲಸಕ್ಕೆ ಬಿಹಾರ ಮೂಲದ ಯುವಕನನ್ನು ಬಳಸಿಕೊಂಡು ದೈಹಿಕ ಹಿಂಸೆ ನೀಡಿದ ಅಧಿಕಾರಿ ವಿರುದ್ಧ ಗುರುವಾರ ಜೈಭೀಮ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿ ದೈಹಿಕ ಹಿಂಸೆ ನೀಡಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ನೈಋತ್ಯ ರೈಲ್ವೆಯ ವಿಭಾಗೀಯ ಮಹಾಪ್ರಬಂಧಕರಿಗೆ ಮನವಿ ಸಲ್ಲಿಸಿದರು.
ರೇಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಪ್ರಕಾಶ ಚೌಧರಿ ಕಳೆದ ನಾಲ್ಕು ವರ್ಷಗಳ ಹಿಂದೆ ಬಿಹಾರ ಮೂಲದ ಉಮೇಶ ಸಾಹು ಎಂಬ ಯುವಕನನ್ನು ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಕರೆದುಕೊಂಡು ಬಂದುಮನೆಯಲ್ಲಿ ಆಳಿನಂತೆ ದುಡಿಸಿಕೊಂಡಿದ್ದಾನೆ. ದೈಹಿಕ ಹಿಂಸೆ ನೀಡಿದ ಅಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು ಅಧಿಕಾರಿ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಜಾಮೀನಿನ ಮೇಲೆ ಹೊರಬಂದಿರುವ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಅನ್ಯಾಯಕ್ಕೊಳಗಾದ ಯುವಕನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಒಂದು ವೇಳೆ ಅನ್ಯಾಯಕ್ಕೊಳಗಾದ ಯುವಕನಿಗೆ ಪರಿಹಾರ ನೀಡದಿದ್ದಲ್ಲಿ ನೈಋತ್ಯ ರೈಲ್ವೆ ಮಹಾಪ್ರಬಂಧಕರ ಕಚೇರಿ ಎದುರು ಜೈ ಭೀಮ್ ಸಂಘಟನೆ ವತಿಯಿಂದ ಪ್ರತಿಭಟನೆ ಮತ್ತು ರೇಲ್ ರೋಖೊ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.