ಸಂಶೋಧನೆ, ಅಭಿವೃದ್ಧಿಯಲ್ಲಿ ಹಿಂದುಳಿದ ಭಾರತ: ಶಂಕರ ಬಿದರಿ
ಧಾರವಾಡ: ಭಾರತವು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಸಾಧಿಸುತ್ತಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.
ಇಲ್ಲಿನ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಇನ್ಸಿಗ್ನಿಯಾ 2013 ತಾಂತ್ರಿಕ ಹಾಗೂ ಸಾಂಸ್ಕೃತಿಕ ಸಮಾರಂಭ ಗುರುವಾರ ಉದ್ಘಾಟಿಸಿದ ಅವರು, ಇಂಗ್ಲೆಂಡ್, ಫ್ರಾನ್ಸ್, ಸ್ವಿಡ್ಜರ್ಲ್ಯಾಂಡ್ ಸೇರಿದಂತೆ ಅನೇಕ ರಾಷ್ಟ್ರಗಳು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಕೈಗೊಂಡಿವೆ. ಭಾರತದಲ್ಲಾಗುತ್ತಿರುವ ಆವಿಷ್ಕಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯ ಯುವ ವಿಜ್ಞಾನಿಗಳು ಅದರ ಪೇಟೆಂಟ್ ಪಡೆದುಕೊಳ್ಳುತ್ತಿಲ್ಲ. ಇದರಿಂದ ವಿದೇಶಿಗರು ಇಲ್ಲಿ ಉತ್ಪಾದಿಸುವ ವಸ್ತುವನ್ನು ಬದಲಾಯಿಸಿ ತಮ್ಮ ರಾಷ್ಟ್ರದ ಪೇಟೆಂಟ್ ಪಡೆದುಕೊಳ್ಳುತ್ತಿದ್ದಾರೆ. ಸಂಶೋಧನೆ ಮತ್ತು ಅಭಿವೃದ್ಧಿ 21ನೇ ಶತಮಾನದಲ್ಲಿ ಅತ್ಯಧಿಕ ಅವಕಾಶ ಕಲ್ಪಿಸಿದ್ದು, ದೇಶದ ತಂತ್ರಜ್ಞಾನಿಗಳು ಹಾಗೂ ಯುವ ಪೀಳಿಗೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು. ಒಬ್ಬ ಮನುಷ್ಯನ ಯಶಸ್ವಿ ವೃತ್ತಿ ಜೀವನದ ಹಿಂದೆ ಆತ ಕಲಿತ ಸಂಸ್ಥೆ ಕಾರಣವಾಗಿರುತ್ತದೆ. ಇಂದು ದೇಶದಲ್ಲಿ ಔದ್ಯೋಗಿಕ ಹಾಗೂ ಶೈಕ್ಷಣಿಕ ಕ್ರಾಂತಿಯಾಗುತ್ತಿದೆ. ಇಲ್ಲಿನ ಸಂಸ್ಥೆಗಳು ಹಾರ್ವರ್ಡ್, ಕೆಂಬ್ರಿಡ್ಜ್ ವಿವಿಗಳಿಂಗಿತ ಕಮ್ಮಿ ಇಲ್ಲ. ಆದರೂ, ನಮ್ಮ ದೇಶದ ಪಾಲಕರು ಸ್ವಪ್ರತಿಷ್ಟೆಗಾಗಿ ತಮ್ಮ ಮಕ್ಕಳನ್ನು ಆಸ್ಟ್ರೇಲಿಯಾ, ನ್ಯೂಜಿಲ್ಯೆಂಡ್ನಂತಹ ದೇಶಗಳಿಗೆ ಉನ್ನತ ಶಿಕ್ಷಣಕ್ಕೆ ಕಳುಹಿಸುತ್ತಿರುವುದು ಖೇದಕರ ಸಂಗತಿ. ದೇಶದಲ್ಲಾಗುತ್ತಿರುವ ಶೈಕ್ಷಣಿಕ ಪ್ರಗತಿ ಹಾಗೂ ಆವಿಷ್ಕಾರಗಳನ್ನು ಇಡೀ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದ್ದು ನಮ್ಮ ವಿದ್ಯಾಸಂಸ್ಥೆಗಳು ಇನ್ನಷ್ಟು ಕಾರ್ಯನ್ಮುಖರಾಗಿ ಕಾರ್ಯ ಮಾಡಿದರೆ ಸಾಕು ಎಂದರು. ತಾಂತ್ರಿಕ ಕ್ಷೇತ್ರದ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಏನನ್ನಾದರೂ ಸಾಧಿಸಬಹುದು. ಪ್ರಸ್ತುತ ಸಂದರ್ಭದಲ್ಲಿ ಯಾವ ವಿದ್ಯಾರ್ಥಿ ತಂತ್ರಜ್ಞಾನವನ್ನು ಜಯಿಸಬಲ್ಲನೋ ಆತನು ಇಡೀ ಜಗತ್ತನ್ನೇ ಆಳಬಹುದು. ಎಂಜಿಯನಿಯರಿಂಗ್ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳು ಯಾವುದೇ ಕ್ಷೇತ್ರದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಂದ ಕಮ್ಮಿಯಿಲ್ಲ. ತಮ್ಮಲ್ಲಿ ಅಡಿಗಿರುವ ಕೀಳರಿಮೆ ತೊರೆದು ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಮುನ್ನುಗ್ಗಬೇಕು ಎಂದರು.
ಎಸ್ಡಿಎಂ ಸೊಸೈಟಿ ಸಹ ಕಾರ್ಯದರ್ಶಿ ಶೀವಂದರ ಕುಮಾರ್, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್. ಮೋಹನ ಕುಮಾರ್ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಕೆ.ಗೋಪಿನಾಥ ಸ್ವಾಗತಿಸಿದರು. ಕು. ನಿತೀಶ, ಮೀನಾಲ್ ಪಾಟೀಲ, ಅಕಬರ ಶಾಹಿಕ್, ನೇಹಾ ಇದ್ದರು. ಪ್ರೊ.ವಿನಾಯಕ ಮಿಸ್ಕಿನ್ ವಂದಿಸಿದರು.