ತವರಲ್ಲಿ ಪ್ರಹ್ಲಾದ ಜೋಶಿಗೆ ಅದ್ಧೂರಿ ಸ್ವಾಗತ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 23
ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊಟ್ಟ ಮೊದಲ ಬಾರಿಗೆ ತವರೂರಿಗೆ ಆಗಮಿಸಿದ ಪ್ರಹ್ಲಾದ ಜೋಶಿಯವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಡಗೂಡಿ ವಿಮಾನದ ಮೂಲಕ ಹುಬ್ಬಳ್ಳಿಗೆ ಶನಿವಾರ ರಾತ್ರಿ ಅವರು ಬಂದಿಳಿದರು. ಜೋಶಿ ಬರುವಿಕೆಯ ಸುದ್ದಿ ತಿಳಿದು ಸಾವಿರಾರು ಕಾರ್ಯಕರ್ತರು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದರು. ಜೋಶಿಯವರಿಗೆ ಆರತಿ ಬೆಳಗಿ ಹೂಮಾಲೆ ಹಾಕಿ, ಪೇಟಾ ತೊಡಿಸಿ ಸಿಹಿ ತಿನ್ನಿಸಿ ಅಕ್ಕರೆಯಿಂದ ಬರಮಾಡಿಕೊಂಡರು. ಜೋಶಿಯವರ ಪರ ಜಯಘೋಷ ಕೂಗಿ ಸಂಭ್ರಮಿಸಿದರು. ಅಕ್ಕರೆಯ ಸ್ವಾಗತ ಸಿಕ್ಕಿದ್ದರಿಂದ ಪ್ರಹ್ಲಾದ ಜೋಶಿ ಆನಂದ ತುಂದಿಲರಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಾವು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೇರುವುದರ ಹಿಂದೆ ತಮ್ಮ ಕ್ಷೇತ್ರದ ಜನತೆಯ ಆಶೀರ್ವಾದವಿದೆ. ಅವರ ಪ್ರೀತಿ-ವಿಶ್ವಾಸಕ್ಕೆ ನಾನು ಚಿರಋಣಿ. ಜನತೆ ವಿಶ್ವಾಸ ಉಳಿಸಿಕೊಂಡು ಸೇವೆ ಮಾಡುತ್ತಾ ಹೋಗುತ್ತೇನೆ. ರಾಜ್ಯಾಧ್ಯಕ್ಷ ಪಟ್ಟವನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದರು.
ಆ ಬಳಿಕ ವಿಮಾನ ನಿಲ್ದಾಣದಿಂದ ಜೋಶಿಯವರ ಮನೆಯವರೆಗೆ ಬೈಕ್ ರ್ಯಾಲಿ ನಡೆಸಲಾಯಿತು.
ತೆರೆದ ವಾಹನದಲ್ಲಿ ಪ್ರಹ್ಲಾದ ಜೋಶಿ, ಸಿಎಂ ಜಗದೀಶ ಶೆಟ್ಟರ್, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಸಾಗಿ ಬಂದರು. ದಾರಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಜೋಶಿ ಹಾಗೂ ಶೆಟ್ಟರ್ ಅವರ ಪರ ಜಯಘೋಷ ಮೊಳಗಿಸಿದರು. ವಿಮಾನ ನಿಲ್ದಾಣದಿಂದ ಗೋಕುಲ ರಸ್ತೆ ಮಾರ್ಗವಾಗಿ ಹೊಸೂರು ಸರ್ಕಲ್, ಬಸವೇಶ್ವರ ವೃತ್ತ, ಚೆನ್ನಮ್ಮ ವೃತ್ತ, ದೇಸಾಯಿ ಸರ್ಕಲ್ ಮಾರ್ಗವಾಗಿ ಜೋಶಿಯವರ ಮನೆಯವರೆಗೆ ರ್ಯಾಲಿ ನಡೆಯಿತು.
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಈರೇಶ ಅಂಚಟಗೇರಿ, ರಂಗಾ ಬದ್ದಿ, ಲಿಂಗರಾಜ ಪಾಟೀಲ, ದತ್ತಾ ಡೋರ್ಲೆ, ನಾಗೇಶ ಕಲ್ಬುರ್ಗಿ, ಲಕ್ಷ್ಮಣ ಗಂಡಗಾಳೇಕರ, ಸಂಜಯ ಕಪಟಕರ ಮತ್ತಿತರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.