ಧಾರವಾಡ: ಟಿಕೆಟ್ಗಾಗಿ ತೀವ್ರ ಕಸರತ್ತು
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 23
ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಧಾರವಾಡ ಜಿಲ್ಲೆ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದು, ಟಿಕೆಟ್ ಗಿಟ್ಟಿಸಲು ತೆರೆಮರೆಯ ಪ್ರಯತ್ನಗಳು ತೀವ್ರಗೊಂಡಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರವೂ ಸೇರಿದಂತೆ ಜಿಲ್ಲೆಯ ಒಟ್ಟು 7 ವಿಧಾನಸಭೆ ಕ್ಷೇತ್ರಗಳಲ್ಲಿನ ಒಂದೆರೆಡು ಕ್ಷೇತ್ರಗಳಲ್ಲಿ ಕೆಲ ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸಿವೆ.
ಅಭ್ಯರ್ಥಿ ಅಂತಿಮಗೊಂಡ ಕ್ಷೇತ್ರದಲ್ಲಿ ಬೇರೆ ಆಕಾಂಕ್ಷಿಗಳು ಟಿಕೆಟ್ಗಾಗಿ ಪಟ್ಟು ಹಿಡಿದಿಲ್ಲ. ಆದರೆ ಅಭ್ಯರ್ಥಿಗಳು ಅಂತಿಮಗೊಳ್ಳದ ಕ್ಷೇತ್ರಗಳಲ್ಲಿ ಟಿಕೆಟ್ಗಾಗಿ ಪೈಪೋಟಿ ತೀವ್ರಗೊಳ್ಳುತ್ತಿದೆ. ಟಿಕೆಟ್ ದೊರೆಯದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬೆದರಿಕೆಗಳೂ ಕೇಳಿಬರುತ್ತಿವೆ. ಹೀಗಾಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಎಲ್ಲ ರಾಜಕೀಯ ಪಕ್ಷಗಳಿಗೆ ತಲೆನೋವಾಗಿದೆ. ಈ ಮಧ್ಯೆ ಬಂಡಾಯ ಅಭ್ಯರ್ಥಿಗಳ ಬೆದರಿಕೆ ತಪ್ಪಿಸಿಕೊಳ್ಳಲು ಕಾಂಗ್ರೆಸ್ ತಡವಾಗಿ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ತಂತ್ರ ಅನುಸರಿಸಲು ನಿರ್ಧರಿಸಿದ್ದಾಗಿ ಮೂಲಗಳು ತಿಳಿಸಿವೆ.
ಹು-ಧಾ ಸೆಂಟ್ರಲ್: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಿಂದ ಈ ಬಾರಿಯೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದು, ಆ ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ಕಣಕ್ಕಿಳಿಯುವ ಇರಾದೆ ತೋರಿಲ್ಲ. ಕುತೂಹಲ ಕೆರಳಿಸಿರುವ ಈ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಎಸ್.ಎಸ್. ಪಾಟೀಲ ಅವರಲ್ಲೊಬ್ಬರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದ್ದು, ಮೋಹನ ಲಿಂಬಿಕಾಯಿ ಹೆಸರು ಮುಂಚೂಣಿಯಲ್ಲಿದೆ. ಮಹಾನಗರ ಪಾಲಿಕೆ ಸದಸ್ಯ ಪಿ.ಕೆ. ರಾಯನಗೌಡರ, ಡಾ. ಮಹೇಶ ನಾಲವಾಡ, ಸದಾನಂದ ಡಂಗನವರ, ಶಂಕರಣ್ಣ ಬೆಳಗಾವಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು. ರಾಯನಗೌಡರ ಹಾಗೂ ಡಂಗನವರ ಮಧ್ಯೆ ಪೈಪೋಟಿ ಹೆಚ್ಚಿದ್ದು, ಅಂತಿಮ ಕ್ಷಣದಲ್ಲಿ ಯಾವುದೇ ಬದಲಾವಣೆಯಾದರೂ ಅಚ್ಚರಿ ಇಲ್ಲ. ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಅಲ್ತಾಫ ಕಿತ್ತೂರ ಹಾಗೂ ತಬರೇಜ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು.
ಹು-ಧಾ ಪೂರ್ವ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಿಂದ ಹಾಲಿ ಶಾಸಕ ವೀರಭದ್ರಪ್ಪ ಹಾಲಹರವಿಗೆ ಈ ಬಾರಿಯೂ ಬಿಜೆಪಿ ಟಿಕೆಟ್ ನೀಡಿದ್ದು, ಕೆಜೆಪಿಯಿಂದ ಶಂಕರಪ್ಪ ಬಿಜವಾಡ ಹೆಸರು ಅಂತಿಮಗೊಂಡಿದೆ. ಕಾಂಗ್ರೆಸ್ ಟಿಕೆಟ್ಗಾಗಿ ಎಸ್.ಎಫ್. ಜಕ್ಕಪ್ಪನವರ ಹಾಗೂ ಪ್ರಸಾದ ಅಬ್ಬಯ್ಯ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ನಿಂದ ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ ಹಾಗೂ ಹನುಮಂತಪ್ಪ ಬಂಕಾಪುರ ಅವರಿಬ್ಬರೂ ಟಿಕೆಟ್ ಆಕಾಂಕ್ಷಿಗಳಾಗಿದ್ದರೂ, ಹನುಮಂತಪ್ಪ ಅಲ್ಕೋಡಗೆ ಟಿಕೆಟ್ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ.
ಹು-ಧಾ ಪಶ್ಚಿಮ: ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಈರೇಶ ಅಂಚಟಗೇರಿ, ಗುರುರಾಜ ಹುಣಸಿಮರದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳು. ಟೆಂಗಿನಕಾಯಿ ಅಥವಾ ಅಂಚಟಗೇರಿ ಅವರೊಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಲಭಿಸುವ ಸಾಧ್ಯತೆ ಹೆಚ್ಚು.
ಕೆಜೆಪಿಯಿಂದ ರಾಜೇಂದ್ರ ಗೋಖಲೆ ಹೆಸರು ಅಂತಿಮಗೊಂಡಿದೆ. ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಸಚಿವ ಎಸ್.ಆರ್. ಮೋರೆ, ನಾಗರಾಜ ಛಬ್ಬಿ, ಮಹಾನಗರ ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ಶರಣಪ್ಪ ಕೊಟಗಿ ತೀವ್ರ ಪೈಪೋಟಿ ನಡೆಸಿದ್ದು, ನಾಗರಾಜ ಛಬ್ಬಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಧಾರವಾಡ: ಧಾರವಾಡ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಹಾಲಿ ಶಾಸಕಿ ಸೀಮಾ ಮಸೂತಿ ಅವರಿಗೇ ದೊರಕುವ ಸಾಧ್ಯತೆಗಳಿದ್ದು, ಯಾರೊಬ್ಬರೂ ಆಕಾಂಕ್ಷಿಗಳಿಲ್ಲ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಿಜನಗೌಡ ಪಾಟೀಲ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದು, ಜೆಡಿಎಸ್ ಟಿಕೆಟ್ ಜಿಲ್ಲಾ ಪಂಚಾಯಿತಿ ಸದಸ್ಯ ಅಮೃತ ದೇಸಾಯಿ ಅವರಿಗೆ ಅಂತಿಮವಾಗಿದೆ. ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಶಾಸಕ ವಿನಯ ಕುಲಕರ್ಣಿ ಹಾಗೂ ಅರುಣ ಚರಂತಿಮಠ ಮಧ್ಯೆ ಪೈಪೋಟಿ ಏರ್ಪಟ್ಟಿದ್ದರೂ, ವಿನಯ ಕುಲಕರ್ಣಿ ಅವರಿಗೇ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚು.
ನವಲಗುಂದ: ಹಾಲಿ ಶಾಸಕ ಹಾಗೂ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ ನವಲಗುಂದ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣವರಗೆ ಕೆಜೆಪಿ ಟಿಕೆಟ್ ಅಂತಿಮಗೊಂಡಿದೆ. ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಸಚಿವ ಕೆ.ಎನ್. ಗಡ್ಡಿ, ಜಿಪಂ ಮಾಜಿ ಸದಸ್ಯ ಸುಭಾಸ ದ್ಯಾಮಕ್ಕನವರ ಹಾಗೂ ಎಚ್.ಬಿ. ಮಾದಳ್ಳಿ ಕಸರತ್ತು ನಡೆಸಿದ್ದಾರೆ. ಜೆಡಿಎಸ್ನಿಂದ ಎನ್.ಎಚ್. ಕೋನರಡ್ಡಿ ಹೆಸರು ಅಂತಿಮಗೊಂಡಿದೆ.
ಕುಂದಗೋಳ: ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಹಾಲಿ ಶಾಸಕ ಎಸ್.ಐ. ಚಿಕ್ಕನಗೌಡರ ಕೆಜೆಪಿಯಿಂದ ಕಣಕ್ಕಿಳಿಯುವುದು ಖಚಿತ. ಬಿಜೆಪಿ ಟಿಕೆಟ್ಗಾಗಿ ಎಂ.ಆರ್. ಪಾಟೀಲ ಹಾಗೂ ಉಪ್ಪಿನ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಮಾಜಿ ಶಾಸಕ ಸಿ.ಎಸ್. ಶಿವಳ್ಳಿ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಎಂ.ಎಸ್. ಅಕ್ಕಿ ಅವರಿಗೆ ಜೆಡಿಎಸ್ ಟಿಕೆಟ್ ಅಂತಿಮಗೊಂಡಿದೆ.
ಕಲಘಟಗಿ: ಹಾಲಿ ಶಾಸಕ ಸಂತೋಷ್ ಲಾಡ್ ಕಲಘಟಗಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯ ಷಣ್ಮುಖ ಗುರಿಕಾರ, ಕೋಳಿನೆಟ್ಟಿ ಹಾಗೂ ಮತ್ತಿಬ್ಬರ ಹೆಸರು ಈ ಕ್ಷೇತ್ರದಿಂದ ಕೇಳಿಬರುತ್ತಿದೆ. ಕೆಜೆಪಿಯಿಂದ ಸಿ.ಎಂ. ನಿಂಬಣ್ಣವರ ಟಿಕೆಟ್ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ.
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚಿನ ಸಮಯಾವಕಾಶ ಇರುವುದರಿಂದ ಟಿಕೆಟ್ ಅಂತಿಮಗೊಂಡಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಟಿಕೆಟ್ ಅಂತಿಮಗೊಳ್ಳದ ಆಕಾಂಕ್ಷಿಗಳಲ್ಲಿ ಕೆಲವರು ಟಿಕೆಟ್ ತಮಗೇ ಖಚಿತವೆಂಬ ವಿಶ್ವಾಸದಿಂದ ಬೀಗುತ್ತಿದ್ದರೆ, ಇನ್ನೂ ಕೆಲವರು ಟಿಕೆಟ್ಗಾಗಿ ಹಗಲಿರುಳು ಪ್ರಯತ್ನ ನಡೆಸಿದ್ದಾರೆ.
-ಆನಂದ ಅಂಗಡಿ