ಸಾಹಿತ್ಯಿಕ ಬಿಕ್ಕಟ್ಟು ಬಿಚ್ಚಿಟ್ಟ ಸಮಾವೇಶ
ಧಾರವಾಡ: ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಆಕ್ರೋಶ, ಜಾಗತೀಕರಣ, ಉದಾರೀಕರಣ ಹಾಗೂ ಖಾಸಗಿಕರಣದಿಂದ ಸಮಾಜದ ಮೇಲೆ ಬೀಳುವ ಪರಿಣಾಮ, ದಾರಿ ತಪ್ಪುತ್ತಿರುವ ಸರ್ಕಾರದ ಕುರಿತು ಯುವ ಸಾಹಿತಿಗಳು ಹಾಗೂ ಹಿರಿಯ ಸಾಹಿತಿಗಳು ತಮ್ಮದೇ ದಾಟಿಯಲ್ಲಿ ಜನಸಾಮಾನ್ಯರನ್ನು ಎಚ್ಚರಿಸಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶನಿವಾರ ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶದ ಗೋಷ್ಠಿಗಳು ಇದಕ್ಕೆ ವೇದಿಕೆಯಾಗಿತ್ತು. ಸಮಾಜ ಸಾಗುತ್ತಿರುವ ಕವಲು ದಾರಿ, ಶಿಕ್ಷಣ, ಸಾಂಸ್ಕೃತಿಕ ನೆಲಗಟ್ಟಿನಲ್ಲಿನ ಸಾಹಿತ್ಯಿಕ ಬಿಕ್ಕಟ್ಟುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಒಂದು ಕ್ಷಣ ಸಮಾವೇಶದಲ್ಲಿದ್ದ ಸಾಹಿತ್ಯಾಸಕ್ತರ ಮೈಮನ ತಲ್ಲಣಗೊಳಿಸಿತು.
ಮೊದಲನೇ ಗೋಷ್ಠಿಯಲ್ಲಿ ವರ್ತಮಾನದ ಬಿಕ್ಕಟ್ಟು, ವಿವಿಧ ನೋಟಗಳು ಎಂಬ ವಿಷಯದ ಮೇಲೆ ನಾಗೇಶ ಹೆಗಡೆ, ಡಾ. ಬಂಜಗೆರೆ ಜಯಪ್ರಕಾಶ, ಎಸ್.ಬಿ. ಜೋಗುರ, ದು. ಸರಸ್ವತಿ ಅವರು ಸಮಾಜದ ಒಳಜಗತ್ತಿನ ಹೂರಣಗಳ ಮೇಲೆ ಬೆಳಕು ಚೆಲ್ಲಿದ ಪರಿ ಇದು.
ಜ್ಞಾನ ವೃದ್ಧಿಸುವ ಪುಸ್ತಕಗಳನ್ನು ಸದ್ಯ ಸಾಹಿತ್ಯ ಕ್ಷೇತ್ರದಲ್ಲಿ ಸೇರಿಸಿಕೊಳ್ಳದೇ, ಇದ್ದುದು ಸಾಹಿತ್ಯ ಕ್ಷೇತ್ರದಲ್ಲಿ ಜ್ಞಾನ ಸಾಹಿತ್ಯಕ್ಕೆ ಅವಕಾಶವಿಲ್ಲ ಎಂದು ತೋರಿಸಿಕೊಟ್ಟಿದೆ. ಕೃಷಿ, ವಿಜ್ಞಾನ, ವೈದ್ಯಕೀಯ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳು ಬಿಡುಗಡೆಗೊಳ್ಳುತ್ತಿವೆ. ಆದರೆ, ಆ ಪುಸ್ತಕಗಳ ಲೇಖಕರನ್ನು ಜ್ಞಾನ ಸಾಹಿತ್ಯದ ಲೇಖಕರೆಂದು ಪರಿಗಣಿಸದೆ, ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಶ್ರೀಸಾಮಾನ್ಯರಿಗೆ ಅನುಕೂಲಕರ ಮಾಹಿತಿ, ಶಿಕ್ಷಣ ನೀಡುವ ಇಂತಹ ಜ್ಞಾನ ಸಾಹಿತ್ಯವನ್ನು ಪರಿಗಣಿಸುವ ಕುರಿತಂತೆ ಚರ್ಚೆ ಮತ್ತು ಚಿಂತನೆಗಳು ನಡೆಯಬೇಕೆಂದರು.
ಡಾ. ಬಂಜಗೆರೆ ಜಯಪ್ರಕಾಶ ಮಾತನಾಡಿ ಜನಸಾಹಿತ್ಯ ಸಮಾವೇಶ ಮೂಲ ಸಂಸ್ಕೃತಿಗೆ ಧಕ್ಕೆ ತರುವ ಮೂಲವನ್ನು ಬೇರು ಸಹಿತ ಕಿತ್ತೆಸೆಯುವ ವೇದಿಕೆಯಾಗಬೇಕೆಂದರು.
ಡಾ. ಎಸ್.ಬಿ. ಜೋಗುರ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ತಾಂತ್ರಿಕತೆಯಿಂದಾಗಿ ಮನುಷ್ಯ-ಮನುಷ್ಯನ ನಡುವಿನ ಸಂಬಂಧದ ಕೊಂಡಿ ಕಳಚಿ ಬಿದ್ದಿದೆ. ಪ್ರೀತಿ, ವ್ಯಾತ್ಸಲ್ಯವೇ ಅಳಿಸಿ ಹೋಗುವಂತಹ ಸಂದಿಗ್ದ ಸ್ಥಿತಿ ಬಂದೊದಗಿದೆ. ಇನ್ನು ಜಾತಿ ಪದ್ಧತಿ ದೇಶಕ್ಕೆ ಅಟ್ಟಿಕೊಂಡ ಶಾಪವಾಗಿದೆ ಎಂದು ವಿಷಾದ ವ್ಯಕ್ಷಪಡಿಸಿದರು.
ದು. ಸರಸ್ವತಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಮಹಿಳೆಯ ಸ್ಥಾನ-ಮಾನಕ್ಕೆ ಧಕ್ಕೆ ಉಂಟು ಮಾಡಿವೆ. ಇಂತಹ ದುರಂತ ಕತೆಗಳಿಗೆ ಅಂತ್ಯ ಹಾಡುವ ಕೆಲಸ ಜನ ಸಾಹಿತ್ಯ ವೇದಿಕೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಡಾ. ಮುಜಾಫರ್ ಅಸ್ಸಾದಿ ಈ ಗೋಷ್ಠಿಗೆ ಸ್ಪಂದನೆ ನೀಡಿದರು. ಡಾ. ಜಗದೀಶ ಕೊಪ್ಪ ನಿರೂಪಿಸಿದರು.