ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸ್ವಹಿತಾಸಕ್ತಿಗಾಗಿ ಸಾಹಿತ್ಯ ಮಾರಾಟ

Mainashree
Updated On : 24 Mar 2013, 11:13 am

ಧಾರವಾಡ: ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಕೆಲ ಸಾಹಿತಿಗಳು ತಮ್ಮ ಸ್ವಹಿತಾಸಕ್ತಿಗಾಗಿ ಸಾಹಿತ್ಯವನ್ನು ಮಾರಿಕೊಳ್ಳುತ್ತಿದ್ದಾರೆ. ಬರಹಗಾರರು ಸಮಾಜದ ಒಳಿತಿಗಾಗಿ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳುಕು ಚೆಲ್ಲುವ ವಿಷಯಗಳ ಮೇಲೆ ತಮ್ಮ ಕಥಾ ವಸ್ತುವನ್ನು ಸ್ಥಿರಗೊಳಿಸುವುದು ಅವಶ್ಯಕವಾಗಿದೆ ಎಂದು ಯುವ ಸಾಹಿತಿ ಬಿ. ಪೀರ್‌ಬಾಷಾ ಅಭಿಪ್ರಾಯಿಸಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ನಡೆದ ಕರ್ನಾಟಕ ಜನಸಾಹಿತ್ಯ ಸಮಾವೇಶದ ಎರಡನೇ ಗೋಷ್ಠಿಯಾದ ಸಮಾಜ ಮತ್ತು ನನ್ನ ಬರಹ ವಿಷಯದ ಕುರಿತು ಮಾತನಾಡಿದರು. ಸಾಹಿತ್ಯ ಮಾರಾಟದ ಸರಕಾಗುತ್ತಿದ್ದು, ಸಾಹಿತ್ಯ ಸಮಾಜದ ಕೆಟ್ಟ ಆಯಾಮಗಳ ಮೇಲೆ ಬೆಳಕು ಚೆಲ್ಲಬೇಕಾಗಿದೆ, ಬರಹ, ಸಾಹಿತ್ಯಕ್ಕಿಂತ ಮಿಗಿಲಾಗಿ ಯುವ ಸಾಹಿತಿಗಳು, ಬರಹಗಾರರು ಸಾಮಾಜಿಕ ಸಮಸ್ಯಗಳಿಗೆ ಸ್ಪಂದಿಸುವ ಅಗತ್ಯತೆ ಇದೆ ಎಂದರು. ವೀರಣ್ಣ ಮಡಿವಾಳರ ಮಾತನಾಡಿ, ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿ ಜೀವನದ ನೆಲಗಟ್ಟು ಕಂಡುಕೊಂಡಿರುವ ನಾವು, ನಾಡಿನಲ್ಲಿ ನಡೆಯುವ ಹೆಣ್ಣು ಮಕ್ಕಳ ಮಾರಾಟದ ವಿಷಯ ಕೇಳಿಯೂ ಸುಮ್ಮನೇ ಕೂರುವ ಸ್ಥಿತಿಯಲ್ಲಿದ್ದೇವೆ. ಅವಸಾನದಂಚಿನಲ್ಲಿರುವ ಬಡಜನತೆಯ ಉಳಿವಿಗಾಗಿ ಹೋರಾಡುವ ಪರಿಸ್ಥಿತಿ ಬಂದೊದಗಿದೆ ಎಂದರು. ಯುವ ಸಾಹಿತಿ ಬಾಲ ಗುರುಮೂರ್ತಿ ಮಾತನಾಡಿ, ಸಾಹಿತ್ಯ ನಿತ್ಯ ಹೊಸ ಹೊಸ ಭರವಸೆಗಳನ್ನು ಮೂಡಿಸುತ್ತದೆ. ಜನರ ವಿಶ್ವಾಸ ಗಳಿಸಕೊಳ್ಳುವ ಪ್ರಯತ್ನದಲ್ಲಿ ಇರುತ್ತದೆ. ಆದರೆ, ಗಂಭೀರವಾಗಿ ಸಾಹಿತ್ಯ ಓದಿದವರು ಸಮಾಜದಲ್ಲಿನ ಶೋಷಿತರ ಬದುಕನ್ನು ರೂಪಿಸುವ ಕೆಲಸವನ್ನು ಏಕೆ ಮಾಡುತ್ತಿಲ್ಲ ಎಂದು ಮನದಾಳದಲ್ಲಿನ ಸಾಮಾಜಿಕ ಹಿತಾಸಕ್ತಿಯ ಪ್ರಶ್ನೆಗಳನ್ನು ಹೊರಗೆಡವಿದರು. ಡಾ. ಕುಂ. ವೀರಭದ್ರಪ್ಪ ಮಾತನಾಡಿದರು. ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಗೋಷ್ಠಿಯನ್ನು ಸಂಯೋಜಿಸಿದರು.

ನಾಳೆ ಜೆಡಿಎಸ್ ಕಾರ್ಯಕರ್ತರ ಸಭೆ
ಧಾರವಾಡ:
ಕಲಘಟಗಿ ವಿಧಾನಸಭಾ ಕ್ಷೇತ್ರದ ತಾಲೂಕಿನ ಗ್ರಾಮ ಘಟಕದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆ ಮಾ. 25ರ ಮಧ್ಯಾಹ್ನ 3ಕ್ಕೆ ಇಲ್ಲಿನ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ ನಡೆಯಲಿದೆ. ಚುನಾವಣಾ ಪ್ರಚಾರದ ನಿಮಿತ್ತ ನಡೆಯಲಿರುವ ಸಭೆ ಅಧ್ಯಕ್ಷತೆಯನ್ನು ಗ್ರಾಮ ಘಟಕದ ಅಧ್ಯಕ್ಷ ಕಲ್ಲಪ್ಪ ಹಟ್ಟಿ ವಹಿಸುವರು. ಬಸವರಾಜ ಹೊರಟ್ಟಿ, ಹನುಮಂತಪ್ಪ ಅಲ್ಕೋಡ, ಎಂ.ಎ. ಕಾಂಟ್ರಾಕ್ಟರ, ಮಾಜಿ ಶಾಸಕ ಎ.ಬಿ. ದೇಸಾಯಿ, ರಾಜಣ್ಣ ಕೊರವಿ ಭಾಗವಹಿಸಲಿದ್ದಾರೆ ಎಂದು ತಾಲೂಕಾಧ್ಯಕ್ಷ ಮಹಾದೇವ ಟಗರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement