ಇಂದು ಬಿಜೆಪಿ ವಿಜಯ ಸಂಕಲ್ಪ ಸಮಾವೇಶ
ಧಾರವಾಡ: ಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರ ಹಾಗೂ ಧಾರವಾಡ ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಸಭೆಯನ್ನು ಇಲ್ಲಿನ ಮೃತ್ಯುಂಜಯ ಕಾಲೇಜು ಆವರಣದಲ್ಲಿ ಮಾ. 25ರಂದು ಹಮ್ಮಿಕೊಳ್ಳಲಾಗಿದೆ.
ಭಾನುವಾರ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಹೇಶ ಟೆಂಗಿನಕಾಯಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಸಭೆ ನಡೆಸಲಾಗುತ್ತಿದ್ದು, ಸಮಾವೇಶಕ್ಕೆ ಸಿಎಂ ಶೆಟ್ಟರ್, ಪಕ್ಷದ ನೂತನ ಅಧ್ಯಕ್ಷ ಪ್ರಹ್ಲಾದ ಜೋಶಿ, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ, ಸಚಿವ ಬಸವರಾಜ ಬೊಮ್ಮಾಯಿ ಆಗಮಿಸುತ್ತಾರೆ. ಸುಮಾರು 15ರಿಂದ 20 ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪಶ್ಚಿಮಕ್ಕೆ ಬಲು ಮಂದಿ..
ಈಗಾಗಲೇ ಹು-ಧಾ ಪೂರ್ವ, ಸೆಂಟರ್ ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರಗಳಿಂದ ವಿಧಾನಸಭಾ ಚುನಾವಣೆಗೆ ಒಂದೊಂದೆ ಅಭ್ಯರ್ಥಿಗಳ ಹೆಸರನ್ನು ಕಳುಹಿಸಲಾಗಿದೆ. ಹು-ಧಾ ಪಶ್ಚಿಮಕ್ಕೆ ನಾನು ಸೇರಿದಂತೆ ಎಂಟು ಜನ ಆಕಾಂಕ್ಷಿಗಳಿದ್ದಾರೆ. ಪಕ್ಷದ ಹಿರಿಯರು ಯಾರಿಗೆ ಟಿಕೆಟ್ ಕೊಡುತ್ತಾರೆಂದು ಕಾದು ನೋಡಬೇಕಿದೆ. ಇನ್ನುಳಿದಂತೆ ಕಲಘಟಗಿ, ಕುಂದಗೋಳ, ನವಲಗುಂದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಈರೇಶ ಅಂಚಟಗೇರಿ, ಈರಣ್ಣ ಹಪ್ಪಳಿ, ದತ್ತಾ ಡೋರ್ಲೆ, ಸಂಜಯ ಕಪಟಕರ, ಸುರೇಶ ಬೇದರೆ, ಮೋಹನ ರಾಮದುರ್ಗ, ಮಂಜು ಬಟ್ಟಣ್ಣವರ ಇದ್ದರು.
ಕೆಜೆಪಿ ತಿರಸ್ಕರಿಸಿದ್ದಾರೆ...
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷವನ್ನು ಮತದಾರ ತಿರಸ್ಕರಿಸಿದ್ದಾನೆ. ಯಾವುದೇ ಕಾರಣಕ್ಕೂ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಕೆಜೆಪಿ ಅಡ್ಡಿಯಾಗದು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ಪಕ್ಷದ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆಯೇ ಹೊರತು ವೈಯಕ್ತಿಕವಾಗಿಲ್ಲ. ಆದ್ದರಿಂದ ಬಿಜೆಪಿ ಪಕ್ಷದ ಸಾಧನೆಗಳನ್ನು ತಮ್ಮ ಸಾಧನೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಯಡಿಯೂರಪ್ಪನವರು ತಮ್ಮ ಸ್ವಯಂಕೃತ ಅಪರಾಧದಿಂದ ಅಧಿಕಾರದಿಂದ ಇಳಿದರೆ ಹೊರತು ಪಕ್ಷದ ತಪ್ಪಿನಿಂದಲ್ಲ.
- ಮಹೇಶ ಟೆಂಗಿನಕಾಯಿ,
ಬಿಜೆಪಿ ಜಿಲ್ಲಾಧ್ಯಕ್ಷ