'ಶೆಟ್ಟರ್ ಕ್ಷೇತ್ರದಲ್ಲಿ ಅಭಿವೃದ್ಧಿ ಝಿರೋ'
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 24
ಕಳೆದ 20 ವರ್ಷಗಳಲ್ಲಿ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿಎಂ ಶೆಟ್ಟರ್ ಅವರು ಅವಳಿ ನಗರ ಸೇರಿದಂತೆ ಈ ಕ್ಷೇತ್ರದಲ್ಲಿನ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮಹೇಶ ನಾಲವಾಡ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾದ ನಂತರ ಕೂಡ ಹು-ಧಾ ನಗರದ ಪರಿಸ್ಥಿತಿ ಸುಧಾರಿಸಿಲ್ಲ. ಗೋಕುಲ್ ರಸ್ತೆಯಿಂದ ಕೇಶ್ವಾಪುರವರೆಗಿನ ರಸ್ತೆಯಲ್ಲಿ ಲ್ಯಾಮಿಂಗ್ಟನ್ ಸ್ಕೂಲ್ ಬಳಿ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಬಸ್ ಶೆಲ್ಟರ್ಗಳು ಕೂಡ ಇಲ್ಲ. ಹುಬ್ಬಳ್ಳಿ ಧಾರವಾಡ ಮಧ್ಯೆ ನಿರ್ಮಾಣವಾಗುತ್ತಿರುವ ಬಿಆರ್ ಟಿಎಸ್ ರಸ್ತೆ ಕಾಮಗಾರಿ ಶೆಟ್ಟರ್ ಅವರು ಮುಖ್ಯಮಂತ್ರಿಯಾದ ನಂತರ ಬೇಗ ಪೂರ್ಣಗೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಅವರು ಸ್ಪೀಕರ್ ಆಗಿ, ಸಚಿವರಾಗಿ ಕೊನೆಗೆ ಮುಖ್ಯಮಂತ್ರಿಯಾದ ನಂತರವೂ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದರು.
ಕೇಂದ್ರ ಸರ್ಕಾರದ ಜೆನರ್ಮ್ ಯೋಜನೆಯನ್ನು ಅವಳಿ ನಗರಕ್ಕೆ ತರುವ ಯತ್ನದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಬೇಸಿಗೆಯಲ್ಲಿ ಅವಳಿ ನಗರದಲ್ಲಿ ಉಂಟಾಗಲಿರುವ ಕುಡಿಯುವ ನೀರಿನ ತೊಂದರೆ ಪರಿಹಾರಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ರಾಜ್ಯದಲ್ಲಿ ಆರಂಭವಾಗಿರುವ ಲೋಡ್ ಶೆಡ್ಡಿಂಗ್ನಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮಧ್ಯಾಹ್ನ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರಿಸಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ರಾತ್ರಿ ನಿರಂತರವಾಗಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು. ಮಹಾನಗರ ಸಭೆ ಸದಸ್ಯರಾಗಿ ಆಯ್ಕೆಯಾಗಿರುವ ವಾರ್ಡ್ ನಂ.48ರ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲಕುಂಟ್ಲ ಅವರು ಮುಖ್ಯಮಂತ್ರಿ ಅವರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಾನು ಪ್ರತಿನಿಧಿಸುತ್ತಿರುವ ವಾರ್ಡ್ ಬರುತ್ತಿದ್ದರೂ ಇಲ್ಲಿಯವರೆಗೆ ನನ್ನ ವಾರ್ಡ್ನಲ್ಲಿ ಅಭಿವೃದ್ಧಿ ಕೆಲಸಕ್ಕೆ ಐದು ಪೈಸೆ ಕೂಡ ನೀಡಿಲ್ಲ ಎಂದು ಆಪಾದಿಸಿದರು.
ವಾರ್ಡ್ 35ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ ಅನಿತಾ ಗುಂಜಾಳ ಅವರು, ಮತದಾನ ನಾಳೆ ಇದೆ ಎನ್ನುವಂತೆ ಬಿಜೆಪಿ ವತಿಯಿಂದ ಮತದಾರರಿಗೆ ತಲಾ 500 ಮತ್ತು ಮನೆಗೆ ತಲಾ ಎರಡು ಸಾವಿರ ರು.ಗಳಂತೆ ಹಣ ಹಂಚಲಾಗಿದ್ದು, ಒಂದೇ ರಾತ್ರಿಯಲ್ಲಿ 35 ಲಕ್ಷಗಳನ್ನು ಚುನಾವಣಾ ಅಕ್ರಮಕ್ಕೆ ಬಿಜೆಪಿ ಬಳಕೆ ಮಾಡಿದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಮಾಜಿ ಮಹಾಪೌರ ಕ್ಯಾರಕಟ್ಟಿ, ಮಹೇಶ ದಾಬಡೆ ಇದ್ದರು.