ಆಶ್ರಯ ಮನೆ ಫಲಾನುಭವಿಗಳಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 25
ಪಾಲಿಕೆ ಅಧಿಕಾರಿಗಳು ಮಧ್ಯವರ್ತಿಗಳ ಸಹಾಯದಿಂದ ಅರ್ಹ ಫಲಾನುಭವಿಗಳಿಂದ ಆಶ್ರಯ ಮನೆಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ನೂರಾರು ಫಲಾನುಭವಿಗಳು ಸೋಮವಾರ ಪಾಲಿಕೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಮನಗರ, ತಾರಿಹಾಳ, ವಾಜಪೇಯಿನಗರ, ಬಂಜಾರ ಕಾಲನಿ, ಗೋಕುಲನಗರ ಹಾಗೂ ಜಗದೀಶ ನಗರದಲ್ಲಿ ಒಟ್ಟು 1025 ಆಶ್ರಯ ಮನೆಗಳನ್ನು ನಿರ್ಮಿಸಲಾಗಿದ್ದು, ಇವೆಲ್ಲವುಗಳನ್ನು 2002ರಲ್ಲೇ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ.
ಆದರೆ, ಈ ಎಲ್ಲ ಪ್ರದೇಶಗಳಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯ ಒದಗಿಸಿಕೊಡಲಾಗಿಲ್ಲ. ಆದಾಗ್ಯೂ, ಬಡಬಗ್ಗರ ಶಾಶ್ವತ ಸೂರು ದೊರೆಯಿತ್ತಲ್ಲ ಎಂದು ವಾಸವಾಗಿದ್ದಾರೆ. ಪಾಲಿಕೆ ಅಧಿಕಾರಿಗಳು, ಈಗಷ್ಟೇ ಆಶ್ರಯ ಮನೆಗಳಲ್ಲಿ ಫಲಾನುಭವಿಗಳು ವಾಸವಾಗಿಲ್ಲ ಎಂಬ ಕಾರಣ ಮುಂದೆ ಮಾಡಿಕೊಂಡು ಫಲಾನುಭವಿಗಳನ್ನು ಅಲ್ಲಿಂದ ಹೊರ ಹಾಕುವ ಹುನ್ನಾರ ನಡೆಸಿದ್ದು, ಇದಕ್ಕೆ ಕೆಲ ಮಧ್ಯವರ್ತಿಗಳ ಕುಮ್ಮಕ್ಕು ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆಶ್ರಯ ಮನೆಗಳಿಗೆ ಕಟ್ಟಬೇಕಾಗಿರುವ ಸಾಲದ ಹಣವನ್ನು ಪಾವತಿಸಲು ಮುಂದೆ ಬರುವ ಫಲಾನುಭವಿಗಳಿಂದ ಪಾಲಿಕೆ ಅಧಿಕಾರಿಗಳು ಹಣ ಭರಿಸಿಕೊಳ್ಳುತ್ತಿಲ್ಲ ಎಂದೂ ಅನೇಕರು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಯ ಮನೆ ನಿವಾಸಿಗಳ ಸಂಘದ ಅಧ್ಯಕ್ಷ ಬಾಬಾಜಾನ ಮುಧೋಳ, ಮಾಜಿ ಸಿಎಂ ಬಿಎಸ್.ವೈ ಅವರ ಸರ್ಕಾರ, ಆಶ್ರಯ ಮನೆ ಫಲಾನುಭವಿಗಳ ಬಡ್ಡಿ ಮಾತ್ರ ಮನ್ನಾ ಮಾಡಿದ್ದಾರೆ. ಆದರೆ, ಸಾಲ ಹಾಗೆಯೇ ಬಿಟ್ಟಿದ್ದಾರೆ. ಬಹಳಷ್ಟು ಫಲಾನುಭವಿಗಳು ಒಪ್ಪತ್ತಿನ ಗಂಜಿಗಾಗಿ ಪರದಾಡಬೇಕಾದ ಸ್ಥಿತಿಯಲ್ಲಿದ್ದಾರೆ. ಆದಾಗ್ಯೂ, ಸಾಲಸೋಲ ಮಾಡಿ ಬಾಕಿ ಹಣ ಪಾವತಿಸಲು ಮುಂದಾದರೂ ಪಾಲಿಕೆ ಅಧಿಕಾರಿಗಳು ಹಣ ಪಾವತಿಸಿಕೊಳ್ಳದೇ ಇರುವುದು ಖಂಡನೀಯ ಎಂದರು.
ಪಾಲಿಕೆ ಆಯುಕ್ತ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಆಶ್ರಯ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಮುಂದೆ ಬರಬೇಕು. ಇಲ್ಲದಿದ್ದಲ್ಲಿ ಪಾಲಿಕೆ ಆವರಣದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದೂ ಎಚ್ಚರಿಸಿದರು.
ಗುರುಸಿದ್ಧಪ್ಪ ಶಿವಶಿಂಪಿ, ಶಿವಾನಂದ ಶಿವಶಿಂಪಿ, ಶಿವಲೀಲಾ ಕಾಲವಾಡ, ಹೊನ್ನಪ್ಪ ವಾಲೀಕಾರ, ವಿದ್ಯಾವತಿ ತಾಮ್ರಳ್ಳಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.