ನೌಕರಿಗಾಗಿ 'ಅದೃಷ್ಟ'ದ ಬೆರಳು ಕಳೆದುಕೊಂಡ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 25
ರೇಲ್ವೆಯಲ್ಲಿ ನೌಕರಿ ದೊರೆತರೆ 'ಅದೃಷ್ಟ' ಖುಲಾಯಿಸಲಿದೆ ಎಂಬ ನಂಬಿಕೆಯಿಂದ ಅದೃಷ್ಟದ ಬೆರಳುಗಳನ್ನೇ ಕತ್ತರಿಸಿಕೊಂಡರೂ ನೌಕರಿ ದೊರಕದ ಯುವಕ ಹಾಗೂ ಆತನ ಕುಟುಂಬ ಬೀದಪಾಲಾದ ಘಟನೆ ನಡೆದಿದೆ.
ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಗಂಡಸಿ ಹೋಬಳಿಯ ಚೆನ್ನಗಿರಿ ನಿವಾಸಿ ಪರಮೇಶ ಸಿ.ಎಚ್. ಎಂಬುವನೇ ಅದೃಷ್ಟದ ಬೆರಳು ಕತ್ತರಿಸಿಕೊಂಡ ಯುವಕ. ತೀರಾ ಬಡ ಕುಟುಂಬದಲ್ಲಿ ಜನಿಸಿರುವ ಪರಮೇಶ, ಕೂಲಿನಾಲಿ ಮಾಡುತ್ತ ಪಿಯುಸಿವರೆಗೆ ವಿದ್ಯಾಭ್ಯಾಸ ಪೂರೈಸಿದ್ದಾನೆ. ರೇಲ್ವೆ ಇಲಾಖೆಯಲ್ಲಿ ನೌಕರಿ ದೊರೆತರೆ ತಮ್ಮ ಕುಟುಂಬದ ಅದೃಷ್ಟವೇ ಬದಲಾಗಲಿದೆ ಎಂದು ಬಲವಾಗಿ ನಂಬಿಕೆ ಹೊಂದಿದ್ದ.
ಈ ಮಧ್ಯೆ ನೈಋತ್ಯ ರೇಲ್ವೆ ವಲಯ 2/2010ರಲ್ಲಿ ನೋಟಿಫಿಕೇಶನ್.ವೊಂದನ್ನು ಹೊರಡಿಸಿ ಒಟ್ಟು 3007 ಗ್ರೂಪ್ ಡಿ ನೌಕರಿಗಾಗಿ ಅರ್ಜಿ ಆಹ್ವಾನಿಸಿತ್ತು. ಈ ನೌಕರಿ ತನ್ನ ಹಾಗೂ ತಮ್ಮ ಕುಟುಂಬದ ಅದೃಷ್ಟ ಖುಲಾಯಿಸಲಿದೆ ಎಂದು ನಂಬಿದ್ದ ಪರಮೇಶ, ಇದೀಗ ನೌಕರಿಯೂ ಇಲ್ಲದೆ, ಸಾಲ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಏನೂ ತೋಚದಂತಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಅದೃಷ್ಟ ಎಂಬುದು ಅಲ್ಲಿಯಾದರೂ ಆತನ ಕೈ ಹಿಡಿಯುವುದೋ ಎಂದು ಕಾದು ನೋಡಬೇಕಷ್ಟೇ.
ಘಟನೆ ಹಿನ್ನೆಲೆ: ಹುಟ್ಟಿನಿಂದಲೇ ಪರಮೇಶನ ಎರಡೂ ಕೈಗಳಲ್ಲಿ 5 ಬದಲಾಗಿ 6 ಬೆರಳುಗಳಿದ್ದವು. ಹೆತ್ತವರು ಮಾತ್ರವಲ್ಲದೆ ಹಿತೈಷಿಗಳು ಇವುಗಳನ್ನು ಅದೃಷ್ಟದ ಬೆರಳುಗಳೆ ಎಂದೇ ಕೊಂಡಾಡುತ್ತಿದ್ದರು. ರೇಲ್ವೆ ಇಲಾಖೆಯಲ್ಲಿ ಡಿ ಗ್ರೂಪ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದಾಗ ಪರಮೇಶನೂ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳಲು ಅರ್ಜಿ ಗುಜರಾಯಿಸಿದ.
11-10-12ರಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದ ಈತನಿಗೆ, ಇಲಾಖೆ 10-12-2012ರಂದು ದಾಖಲಾತಿ ಪರೀಕ್ಷೆಗೆ ಹಾಜರಾಗಲು ತಿಳಿಸಿತು. ಅದರಲ್ಲಿಯೂ ಯಶಸ್ವಿಯಾದ ನಂತರ 2-01-2013ರಲ್ಲಿ ಮೈಸೂರಿನಲ್ಲಿರುವ ರೇಲ್ವೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡುವಂತೆ ಪರಮೇಶ್.ಗೆ ಸೂಚಿಸಲಾಯಿತು.
ಅದೃಷ್ಟದ ಬೆರಳುಗಳಿಗೆ ಕತ್ತರಿ!: ದೈಹಿಕ ಪರೀಕ್ಷೆ ನಡೆಸಿದ ಡಾ. ಎಚ್.ಸಿ. ಸವಿತಾ, ಅದೃಷ್ಟದ ಬೆರಳುಗಳನ್ನು ಕತ್ತರಿಸಿಕೊಂಡು ಬಂದರೆ ಆರೋಗ್ಯ ಪರೀಕ್ಷೆಯಲ್ಲಿ ಪಾಸಾಗುವೆ ಎಂದು ಪರಮೇಶ್.ಗೆ ತಿಳಿಸಿದರು. ನೌಕರಿಗಾಗಿ ಎಂತಹ ಪರೀಕ್ಷೆಯನ್ನೂ ಎದುರಿಸಲು ಸಿದ್ಧನಾಗಿದ್ದ ಈತ, ರು. 10 ಸಾವಿರ ಸಾಲ ಮಾಡಿ ಹಾಸನದಲ್ಲಿರುವ ಸಿಎಸ್.ಐ ರೆಡ್.ಪರ್ನ್ ಮೆಮೊರಿಯಲ್ ಆಸ್ಪತ್ರೆಯಲ್ಲಿ 3-1-2013ರಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಅದೃಷ್ಟ ಬೆರಳುಗಳನ್ನು ಕತ್ತರಿಸಿಕೊಂಡು ಬಿಟ್ಟ!
ಹೆಚ್ಚುವರಿ: ನಂತರ ಮತ್ತೆ ದೈಹಿಕ ಪರೀಕ್ಷೆಗೆ ಹಾಜರಾದಾಗ ಡಾ. ಸವಿತಾ, ಪರಮೇಶನನ್ನು ಪಾಸ್ ಆಗಿರುವ ಬಗ್ಗೆ ತಿಳಿಸಿದರಲ್ಲದೇ, ಈ ಬಗ್ಗೆ ರೇಲ್ವೆ ಮೇಲಧಿಕಾರಿಗಳಿಗೆ ಲಿಖಿತವಾಗಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದರಿಂದ ಅದೃಷ್ಟದ ಬೆರಳುಗಳನ್ನು ಬಲಿಕೊಟ್ಟು ಅದೃಷ್ಟ ಪಡೆದುಕೊಂಡೆ ಎಂಬ ಸಂತಸದಲ್ಲೇ ಯುವಕ ಊರಿನತ್ತ ತೆರಳಿದ್ದ.
ನೇಮಕಾತಿ ಹೊಂದಿದವರ ಹೆಸರು ರೇಲ್ವೆ ವೆಬ್.ಸೈಟ್.ನಲ್ಲಿ ಪ್ರಕಟಿಸಲಾಗಿದೆ ಎಂಬ ಸುದ್ದಿ ತಿಳಿದು ಅತ್ಯಂತ ಉತ್ಸುಕತೆಯಿಂದಲೆ ಇಂಟರ್.ನೆಟ್ ಸೆಂಟರ್.ಗೆ ತೆರಳಿದ್ದ ಪರಮೇಶಗೆ 'ಹೆಚ್ಚುವರಿ' ಎಂಬ ಪದ ತಲೆಮೇಲೆ ಆಕಾಶವೇ ಕಳಚಿ ಬೀಳುವಂತೆ ಮಾಡಿದೆ. ವೆಬ್.ಸೈಟ್.ನಲ್ಲಿ ರೂಲ್ ನಂ. ಹಾಗೂ ಜನ್ಮ ದಿನಾಂಕ ಟೈಪ್ ಮಾಡುತ್ತಿದ್ದಂತೆಯೇ, ಪರಮೇಶನ ಹೆಸರನ್ನು ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಲಾಗಿದ್ದು ಕಂಡು ಬಂದಿತು. ಇತ್ತ ಹಣವೂ ಕಳೆದುಕೊಂಡು ಅತ್ತ ಗುಣವೂ ಕಳೆದುಕೊಂಡಂತಹ ಯಾತನೆಯಲ್ಲಿ ಪರಮೇಶ ಕುಟುಂಬ ಬದುಕು ಸಾಗಿಸುವಂತಾಗಿದೆ.
ಕಾನೂನು ಹೋರಾಟ: ರೇಲ್ವೆ ಇಲಾಖೆಯಿಂದ ತಮಗೆ ಅನ್ಯಾಯವಾಗಿದೆ ಎಂದು ಪರಮೇಶ ಇದೀಗ ಧಾರವಾಡ ಸಂಚಾರಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಆಧಾರದ ಮೇಲೆ ನ್ಯಾಯಾಲಯ ರೇಲ್ವೆ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್.ನ್ನು ಜಾರಿಗೊಳಿಸಿದೆ.
ಪರಮೇಶ ಹಾಗೂ ಆತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವವರೆಗೂ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಎಐಟಿಸಿಯುನ ದೇವಾನಂದ ಜಗಾಪುರ ಹಾಗೂ ಬಿ.ಎ. ಮುಧೋಳ ತಿಳಿಸಿದ್ದಾರೆ.
ಬಡತನದ ಬೇಗುದಿಯಲ್ಲಿ ಬಳಲುತ್ತಿರುವ ಪರಮೇಶ ಹಾಗೂ ಆತನ ಕುಟುಂಬದ 'ಅದೃಷ್ಟ' ಕಾನೂನು ಹೋರಾಟದಿಂದಲಾದರೂ ಖುಲಾಯಿಸುವುದೇ ಎಂಬುದು ಕಾದು ನೋಡಬೇಕಿದೆ.