ಮತದಾರರ ಜಾಗೃತಿಗಾಗಿ ಜಿಲ್ಲಾ ಸಮಿತಿ ರಚನೆ
ಧಾರವಾಡ: ಮತದಾರರ ಪಟ್ಟಿಯಲ್ಲಿ ಹೊಸದಾಗಿ ಅದರಲ್ಲೂ ವಿಶೇಷವಾಗಿ ಅರ್ಹ ಯುವ ಮತದಾರರು ಹೆಸರು ನೋಂದಾಯಿಸುವುದು ಹಾಗೂ ಮತದಾರರ ಪಟ್ಟಿಯಲ್ಲಿ ಇರುವ ಪ್ರತಿಯೊಬ್ಬರು ಮತ ಚಲಾಯಿಸಲು ಪ್ರೇರೇಪಿಸಲು ಚುನಾವಣಾ ಆಯೋಗ ಪ್ರತಿ ಜಿಲ್ಲೆಯಲ್ಲಿ ಮತದಾರರ ಶಿಕ್ಷಣ ಹಾಗೂ ಮತದಾನದಲ್ಲಿ ಅವರ ವ್ಯವಸ್ಥಿತ ಪಾಲ್ಗೊಳ್ಳುವಿಕೆ ಎಂಬ ಜಿಲ್ಲಾ ಮಟ್ಟದ ಸಮಿತಿ ರಚಿಸಿದೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಎರಡು ಹಂತದಲ್ಲಿ ಈ ಕುರಿತು ಕಾರ್ಯಕ್ರಮ ರೂಪಿಸಿ ಅದನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ಮತದಾರರಲ್ಲಿ ಅರಿವು ಮೂಡಿಸಲು ಮಾ. 30ರಂದು ಧಾರವಾಡದಲ್ಲಿ ಮತದಾರ ಜಾಗೃತಿಗಾಗಿ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮ ಮತ್ತು ಏ. 2ರಂದು ಎಲ್ಲ ತಾಲೂಕುಗಳಲ್ಲಿ ಇಂತಹದೇ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು. ಬೂತ್ ಮಟ್ಟದಿಂದಲೇ ಈ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕೋರ್ ಕಮಿಟಿ ರಚನೆ ಮಾಡಲಾಯಿತು. ಕಾಲೇಜು, ಮೆಟ್ರಿಕ್ಪೂರ್ವ ವಸತಿ ನಿಲಯಗಳಲ್ಲಿನ ಅರ್ಹರನ್ನು ಗುರುತಿಸಿ ಅವರ ಹೆಸರು ಸೇರ್ಪಡೆ, ನಗರ ಹಾಗೂ ಗ್ರಾಮ ಪ್ರದೇಶಗಳಲ್ಲಿ ಬೂತ್ ಮಟ್ಟದಲ್ಲಿ ಅರ್ಹ ಮತದಾರರ ಸೇರ್ಪಡೆ, ಉದ್ದಿಮೆದಾರರು ಹಾಗೂ ಕಾರ್ಖಾನೆಗಳಲ್ಲಿರುವ ಕಾರ್ಮಿಕರಿಗೆ ಅರಿವು ಮೂಡಿಸಲು, ವಿವಿಧ ಉಪಕ್ರಮಗಳ ಅನುಷ್ಠಾನಕ್ಕೆ ಸೂಚಿಸಲಾಯಿತು. ಯುವಕರು ಹಾಗೂ ಸಾರ್ವಜನಿಕರ ರ್ಯಾಲಿ, ಜಾಥಾ ಕ್ರಮಗಳನ್ನು ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಬೀದಿ ನಾಟಕ, ಸಂಗೀತ ಪ್ರಚಾರ ಮತ್ತು ಚಲನಚಿತ್ರಗಳ ಮೂಲಕ ಸಹ ಅರಿವು ಮೂಡಿಸಲು ಸಭೆಯಲ್ಲಿ ಸೂಚಿಸಲಾಯಿತು. ಎರಡು ಹಂತಗಳಲ್ಲಿ ಜರುಗುವ ಈ ಕಾರ್ಯಕ್ರಮದ ಉಸ್ತುವಾರಿಗಾಗಿ ಪ್ರತಿ ತಾಲೂಕಿಗೆ ಓರ್ವ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಸಮಿತಿ ಸದಸ್ಯರು, ಪುರಸಭೆ ಮುಖ್ಯಾಧಿಕಾರಿಗಳು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು. ಸಮಿತಿ ನೋಡಲ್ ಅಧಿಕಾರಿ ಹಾಗೂ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್. ಪರ್ವತಿ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ
ಹುಬ್ಬಳ್ಳಿ: ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ನೂತನ ಅಧ್ಯಕ್ಷರಾಗಿ ಸದಾಶಿವ ಕಾರಡಗಿ ಆಯ್ಕೆಗೊಂಡಿದ್ದಾರೆ. ಸಮಿತಿ ಪದಾಧಿಕಾರಿಗಳಾಗಿ ಗಂಗಪ್ಪ ಉಳ್ಳಾಗಡ್ಡಿ (ಉಪಾಧ್ಯಕ್ಷ), ಡಾ. ಬಿ.ಎಂ. ಜಾಬಣ್ಣವರ (ಪ್ರಧಾನ ಕಾರ್ಯದರ್ಶಿ), ಮಲ್ಲಿಕಾರ್ಜುನ ಗುರನಳ್ಳಿ (ಸಹ ಕಾರ್ಯದರ್ಶಿ), ಬಸವರಾಜ ಬಾಳಿಕಾಯಿ (ಕಾರ್ಯಾಧ್ಯಕ್ಷ), ಕಲ್ಲಪ್ಪ ಚಿಂಚಲಿ (ಸಂಪರ್ಕಾಧಿಕಾರಿ), ಶ್ರೀಶೈಲ ಉಮರಾಣಿ (ಕೋಶಾಧ್ಯಕ್ಷ), ಗುರುಸಿದ್ದಪ್ಪ ಹವಾಲ್ದಾರ (ಸಹ ಕೋಶಾಧ್ಯಕ್ಷ), ಚನ್ನಪ್ಪ ದಿವಟರ, ಕಲ್ಲಪ್ಪ ಜಾಧವ, ರಾಜು ಗುಡಿ (ಸದಸ್ಯರು) ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ