ಸಮಯಪ್ರಜ್ಞೆ ಬೇಕು
ಹುಬ್ಬಳ್ಳಿ: ವಿದ್ಯಾರ್ಥಿ ಜೀವನದಲ್ಲಿ ದೃಢ ಸಂಕಲ್ಪ, ಸಮಯ ಪ್ರಜ್ಞೆ, ಸ್ಪರ್ಧಾತ್ಮಕ ಮನೋಭಾವ ಮತ್ತು ಕ್ರಿಯಾಶೀಲತೆ ಮುಖ್ಯ ಪಾತ್ರವಹಿಸುತ್ತವೆ ಎಂದು ಶಿಕ್ಷಣ ತಜ್ಞ ಪ್ರೊ. ಸಿ.ಸಿ. ದೀಕ್ಷಿತ ಹೇಳಿದರು. ಐಬಿಎಂಆರ್ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವ್ಯವಹಾರಿಕ ವಾಣಿಜ್ಯ ಮತ್ತು ತಾಂತ್ರಿಕ ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಡಾ. ರಾಜೇಂದ್ರ ಮಾಳವದೆ ಐಬಿಎಂಆರ್ ಯುವಜನೋತ್ಸವದಲ್ಲಿ ಆಯೋಜಿಸಿದ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಐಬಿಎಂಆರ್ ಸಂಸ್ಥಾಪಕ ವಿನಯಚಂದ್ರ ಮಹೇಂದ್ರಕರ್ ಅವರು, ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನಗಳ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ ಆವಿಷ್ಕಾರ ಮಾಡಬೇಕೆಂದು ಎಂದರು. ರಾಜ್ಯದ ಸುಮಾರು 10ಕ್ಕೂ ಹೆಚ್ಚು ಮಹಾವಿದ್ಯಾಲಯಗಳ 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಕ್ಷತಾ, ಪ್ರೊ. ಎಲ್. ಎನ್. ದೇಸಾಯಿ, ಪ್ರಾಚಾರ್ಯ ಪ್ರೊ. ಸದಾನಂದ ಹಾವಣಗಿ ಮುಂತಾದವರು ಉಪಸ್ಥಿತರಿದ್ದರು.