ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೇಂದ್ರದಿಂದ ಅನುದಾನ ಬಿಡುಗಡೆ ವಿಳಂಬ: ಜೋಶಿ

Rashmi Kasaragodu
Updated On : 28 Mar 2013, 11:13 am

ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿ ಬಿಜಾಪುರ-ಹುಬ್ಬಳ್ಳಿ, ಅಂಕೋಲಾ-ಗೂಟಿ ಹಾಗೂ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸಿ ನಿರ್ಮಿಸಲಾಗುವ ಬೈಪಾಸ್ ಹೆದ್ದಾರಿ ಕಾಮಗಾರಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ಲೋಕಸಭೆಯ ಕಲಾಪದ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬೈಪಾಸ್ ರಸ್ತೆಗೆ ಅಗತ್ಯವಿರುವ ಹೆಚ್ಚುವರಿ ರು. 23.07 ಕೋಟಿಗಳನ್ನ್ನು ಬೇಗನೇ ಬಿಡುಗಡೆ ಮಾಡಬೇಕೆಂದು ಸಂಸದ ಪ್ರಹ್ಲಾದ ಜೋಶಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಹುಬ್ಬಳ್ಳಿ ನಗರದ ಕೇಂದ್ರ ಭಾಗದ ಮೇಲಿನ ಸಂಚಾರ ಒತ್ತಡ ಬೀಳುತ್ತಿದೆ. ಇದನ್ನು ಕಡಿಮೆಗೊಳಿಸಲು ಮೂರು ರಾಷ್ಟ್ರೀಯ ಹೆದ್ದಾರಿಗಳನ್ನ್ನು ನಗರದ ಹೊರಭಾಗದಲ್ಲಿ ಜೋಡಿಸುವ ಯೋಜನೆ ಬಹಳ ಮಹತ್ವದ್ದಾಗಿದ್ದು ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಭೂಮಾಲೀಕರಿಗೆ ನೀಡಬೇಕಾಗಿರುವ ಪರಿಹಾರ ಮೊತ್ತದಲ್ಲಿ ಹೆಚ್ಚುವರಿ 23.07 ಕೋಟಿಗಳಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒಂದು ವರ್ಷದ ಹಿಂದೆ ಸಲ್ಲಿಸಲಾಗಿದೆ. ಕಳೆದ ಆಗಸ್ಟ್‌ನಲ್ಲಿ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಕೇಂದ್ರ ಹೆದ್ದಾರಿ ಸಚಿವರನ್ನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ  ಇಲ್ಲಿಯವರೆಗೆ ಪ್ರತಿಕ್ರಿಯೆ ಇಲ್ಲ. ಅಲ್ಲದೇ ಹಲವಾರು ಬಾರಿ ಪತ್ರ ಬರೆದು ಹಣ ಬಿಡುಗಡೆಗೆ ಒತ್ತಾಯಿಸಲಾಗಿದೆ. ಹಣ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬದಿಂದ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಅನನೂಕೂಲವಾಗಿದೆ. ಯೋಜನೆ ಅನುಷ್ಠಾನದಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಜೈವಿಕ ಇಂಧನ ಸಸ್ಯ ಬೆಳೆಸಿ
ಧಾರವಾಡ:
ಜೈವಿಕ ಇಂಧನ ಉತ್ಪನ್ನ ಸಸಿಗಳನ್ನು ನೆಡುವುದರಿಂದ ಡೀಸೆಲ್ ಕೊರತೆ ನೀಗಿಸಲು ಸಾಧ್ಯ ಎಂದು ಕೃಷಿ ವಿವಿ ಪ್ರಾಧ್ಯಾಪಕ ಡಾ'ಜೆ.ಎಸ್. ಪಾಟೀಲ ಹೇಳಿದರು. ಕರ್ನಾಟಕ ವಿವಿ ಆವರಣದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅರಣ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜೈವಿಕ ಇಂಧನ ಸಸಿಗಳನ್ನು ನೆಡುವುದರಿಂದ ಕಾಡು ಬೆಳೆಸಿದಂತಾಗುತ್ತದೆ. ಮುಂದಿನ ಪೀಳಿಗೆ ಎದುರಿಸುವ ಡೀಸೆಲ್ ಕೊರತೆ ಭರಿಸಿದಂತಾಗುತ್ತದೆ. ರೈತ ಸಮುದಾಯ ತಮ್ಮ ಹೊಲಗಳಲ್ಲಿ ಬದುಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಡುವುದರಿಂದ ಲಾಭ ಪಡೆಯಬಹುದು ಎಂದರು. ಜೈವಿಕ ಇಂಧನ ಸಸ್ಯಗಳಾದ ಸಿಮ್‌ರೂಭಾ ಹಾಗೂ ಜಟ್ರೂಪಾಗಳನ್ನು ವನಮಹೋತ್ಸವದ ಅಂಗವಾಗಿ ನೆಡಲಾಯಿತು. ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾರ್ಯ ನಿರ್ವಹಣಾಧಿಕಾರಿ ಡಾ.ಯು.ಎಸ್. ರಾಯ್ಕರ, ಎಸ್.ಕೆ. ರಂಜಣಗಿ, ಸಿ.ಎಫ್. ಚಂಡೂರ, ಅಡಿವೆಪ್ಪ ಅಂತಣ್ಣವರ, ಎಸ್.ಎಫ್. ಆಡಿನ, ಆರ್.ಪಿ. ಗಾಳಿ, ಪ್ರಮೋದ ಆರ್., ಶಶಿಧರ ಬಿ., ಎಂ.ಕೆ. ಹೊರಕೇರಿ, ಲಕ್ಷ್ಮಣ ಕೆ.ಎನ್., ಶ್ಯಾಮ ತೇಲಗಾರ, ಎಂ.ಸಿ. ಶಂಕರೇಗೌಡ, ಅಭಿಷೇಕ ಸಿ., ಬಿ.ಎಸ್. ಗಾಂವಕರ, ಎಂ.ಸಿ. ಕಂದಗಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement