ಪಕ್ಷೇತರರಿಗೆ ಮಣೆ ಹಾಕದ ಧಾರವಾಡ ಮಂದಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 27
ರಾಜ್ಯ ವಿಧಾನಸಭೆಗೆ 1957ರಿಂದ ಇದುವರೆಗೆ ನಡೆದ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಮತದಾರರು ಪಕ್ಷೇತರ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು ಅಷ್ಟಕ್ಕಷ್ಟೇ.
2008ರಲ್ಲಿ ನಡೆದ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡನೆ ಮುಂಚೆ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಹುಬ್ಬಳ್ಳಿ ಶಹರ ವಿಧಾನಸಭೆ ಕ್ಷೇತ್ರ, ಹುಬ್ಬಳ್ಳಿ ಗ್ರಾಮೀಣ ವಿಧಾನಸಭೆ ಕ್ಷೇತ್ರ ಹಾಗೂ ನವಲಗುಂದ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಒಂದು ಬಾರಿಯೂ ಗೆಲುವು ಸಾಧಿಸಿಲ್ಲ.
ಆದರೆ, ಕಲಘಟಗಿ ವಿಧಾನಸಭೆ ಕ್ಷೇತ್ರದಲ್ಲಿ ಮೂರು ಬಾರಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅತಿ ಹೆಚ್ಚು ಬಾರಿ ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿದ ಜಿಲ್ಲೆಯ ವಿಧಾನಸಭೆ ಕ್ಷೇತ್ರವೆಂಬ ಖ್ಯಾತಿಗೊಳಗಾಗಿದೆ. ಧಾರವಾಡ ಗ್ರಾಮೀಣ ಮತ್ತು ಕುಂದಗೋಳ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ ಎರಡು ಬಾರಿ ಮತ್ತು ಧಾರವಾಡ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಬಾರಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
1999 ಹಾಗೂ 2004ರಲ್ಲಿ ವಿಧಾನಸಭೆ ನಡೆದ ಚುನಾವಣೆಗಳೆರಡರಲ್ಲೂ ಸತತವಾಗಿ ಪಕ್ಷೇತರ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದು ಗಮನಾರ್ಹ. ಈ ಇಬ್ಬರೂ ಪಕ್ಷೇತರ ಅಭ್ಯರ್ಥಿಗಳು ಮೂಲತಃ ಕಾಂಗ್ರೆಸ್ನವರಾಗಿದ್ದು, ಕಾಂಗ್ರೆಸ್ ಟಿಕೆಟ್ ಬೇರೊಬ್ಬರಿಗೆ ದೊರೆತ ಕಾರಣ ಪಕ್ಷೇತರರಾಗಿ ಕಣದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಗೆಲುವಿನ ನಂತರ ಮತ್ತೆ ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡರು.
1999ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಅಂಬಡಗಟ್ಟಿ ಜಯ ಗಳಿಸಿದ್ದರು. 1994ರಲ್ಲಿ ಈ ಕ್ಷೇತ್ರ ಪ್ರತಿನಿಧಿಸಿದ್ದ ಕಾಂಗ್ರೆಸ್ನ ಶ್ರೀಕಾಂತ ಅಂಬಡಗಟ್ಟಿ ಸಾವಿನ ನಂತರ 1998ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಸಹೋದರ ಶಶಿಧರ ಅಂಬಡಗಟ್ಟಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ನಂತರ ಶಶಿಧರ ಅಂಬಡಗಟ್ಟಿ ಅವರೂ ಸಾವಿಗೀಡಾದರು. ನಂತರ 1999ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರೋಹಿತ ನಾಯ್ಕರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಈ ಸಂದರ್ಭ ಪಕ್ಷೇತರ ಅಭ್ಯರ್ಥಿಯಾಗಿದ್ದ ಶಿವಾನಂದ ಅಂಬಡಗಟ್ಟಿ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಶಿವಾನಂದ ಹೊಳೆಹಡಗಲಿ ಅವರನ್ನು 3 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದರು.
ಕಾಂಗ್ರೆಸ್ನ ರೋಹಿತ ನಾಯ್ಕರ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಈ ಚುನಾವಣೆಯ ಮರು ಅವಧಿಗೆ 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಶಿವಾನಂದ ಅಂಬಡಗಟ್ಟಿ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು. ಆದರೆ, ಕಾಂಗ್ರೆಸ್ ಮುಖಂಡರಾಗಿದ್ದ ವಿನಯ ಕುಲಕರ್ಣಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, 3 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯ ಗಳಿಸಿದರು. ಜೆಡಿಯುನ ಎ.ಬಿ. ದೇಸಾಯಿ ಸೋತ ಸಮೀಪದ ಪ್ರತಿಸ್ಪರ್ಧಿ. ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಶಿವಾನಂದ ಅಂಬಡಗಟ್ಟಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
1985ರ ಚುನಾವಣೆಯಲ್ಲಿ ಧಾರವಾಡ ವಿಧಾನಸಭೆ ಕ್ಷೇತ್ರದಿಂದ ಚಂದ್ರಕಾಂತ ಬೆಲ್ಲದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ನ ಲೀಲಾವತಿ ಚರಂತಿಮಠ ಅವರನ್ನು ಸೋಲಿಸಿ, 1,500ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.
ಜನತಾ ಪಾರ್ಟಿಯ ಗಂಗಾಧರ ಪದಕಿ ಮೂರನೇ ಸ್ಥಾನಕ್ಕೆ ತೃಪ್ತಿಗೊಂಡಿದ್ದರು. ಮೂವರು ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿದ ಖ್ಯಾತಿ ಕಲಘಟಗಿ ವಿಧಾನಸಭೆ ಕ್ಷೇತ್ರದ್ದು. 1957ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಬಸವರಾಜ ದೇಸಾಯಿ 6 ಸಾವಿರಕ್ಕೂ ಹೆಚ್ಚು ಮತಗಳಿಗಿಂತ ಹೆಚ್ಚಿನ ಅಂತರದಿಂದ ಗೆಲುವು ಪಡೆದಿದ್ದರು. ಕಾಂಗ್ರೆಸ್ನ ಎ.ವಿ. ಕೊವಾಡಿ ಸೋಲುಂಡ ಸಮೀಪದ ಪ್ರತಿಸ್ಪರ್ಧಿ. 1967ರಲ್ಲಿ ಪಕ್ಷೇತರ ಅಭ್ಯರ್ಥಿ ಎಫ್.ಎಸ್. ಪಾಟೀಲ 8 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
1983ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಫಾದರ್ ಪಿ. ಜಾಕೋಬ್ 23,664 ಮತ ಪಡೆಯುವ ಮೂಲಕ ಜಯಶಾಲಿಯಾಗಿದ್ದರು. ಕಾಂಗ್ರೆಸ್ನ ಎಫ್.ಎಸ್. ಪಾಟೀಲ 23,168 ಮತ ಪಡೆವ ಮೂಲಕ ಗೆಲುವಿನಿಂದ ವಂಚಿತರಾಗಿದ್ದರು.
1967ರ ಚುನಾವಣೆಯಲ್ಲಿ ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ಎಸ್.ಆರ್. ಬೊಮ್ಮಾಯಿ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಇವರು 20,291 ಮತ ಪಡೆದಿದ್ದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಟಿ.ಕೆ. ಕಾಂಬಳೆ 9,371 ಮತ ಪಡೆದಿದ್ದರು. 1999ರ ಚುನಾವಣೆಯಲ್ಲಿ ಇದೇ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಿ.ಎಸ್. ಶಿವಳ್ಳಿ ಜಯ ಗಳಿಸಿದ್ದರು. ಶಿವಳ್ಳಿ ಅವರಿಗೆ 30,692 ಮತ ಲಭಿಸಿದ್ದರೆ, ಸಮೀಪದ ಪ್ರತಿಸ್ಪರ್ಧಿ ಜೆಡಿಯುನ ಎಂ.ಎಸ್. ಅಕ್ಕಿ 20,184 ಮತ ಪಡೆದುಕೊಂಡಿದ್ದರು.
- ಆನಂದ ಅಂಗಡಿ