ಮುಗಿಯದ ಕಾಮಗಾರಿ ಉದ್ಘಾಟನೆ: ಆರೋಪ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 27
ರು. 2.5 ಕೋಟಿಗಳ ವೆಚ್ಚದಲ್ಲಿ ಕುಸುಗಲ್ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲಾದ ಕುಡಿಯುವ ನೀರು ಪೂರೈಕೆ ಯೋಜನೆ ಪೂರ್ಣಗೊಳ್ಳುವ ಮುನ್ನವೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇಕೊಪ್ಪ ಅವರು ಉದ್ಘಾಟಿಸಿದ್ದು ವಿಪರ್ಯಾಸದ ಸಂಗತಿ ಎಂದು ಜಾಗೃತ ದಳ ಆರೋಪಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಂಘಟನೆಯು ಗ್ರಾಮದಲ್ಲಿ ಅಳವಡಿಸಲಾಗಿರುವ ಪೈಪ್ಲೈನ್, ನಳ ಜೋಡಣೆ ಸರಿಯಾಗಿಲ್ಲ, ಕುಡಿಯುವ ನೀರು ಪೂರೈಸುವ ಬ್ಯಾಹಟ್ಟಿ ಕ್ವಾರಿಯಲ್ಲಿ ಫಿನಿಷಿಂಗ್ ಪೂರ್ಣಗೊಳ್ಳುವ ಮೊದಲೇ ಕಾಮಗಾರಿ ಉದ್ಘಾಟನೆ ಮಾಡಲಾಗಿದೆ ಎಂದು ಆರೋಪಿಸಿದೆ.
ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿದ್ದರೂ ಶಾಸಕ ಮುನೇನಕೊಪ್ಪ ಅವರು ಮತ್ತೊಮ್ಮೆ ಗ್ರಾಮದ ಹಿರಿಯರ ಒತ್ತಾಸೆ ಮೇರೆಗೆ ಭೂಮಿ ನೆರವೇರಿಸಿದ್ದಾರೆ. ಜಲ ನಿರ್ಮಲ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಕೂಡ ಪೂರ್ಣಗೊಳ್ಳುವ ಮೊದಲೇ ಉದ್ಘಾಟಿಸಲಾಗಿದ್ದು ಇದಕ್ಕೆ ಗ್ರಾಮದ ಹಿರಿಯರು ಸಹಮತ ವ್ಯಕ್ತಪಡಿಸಿರುವುದು ನೋಡಿದರೇ ಗ್ರಾಮದ ಅಭಿವೃದ್ದಿ ಕುರಿತು ಹಿರಿಯರಿಗೆ ಕಾಳಜಿ ಇಲ್ಲ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಕುಸುಗಲ್ ಜಾಗೃತ ದಳದ ಅಧ್ಯಕ್ಷ ರಾಮು ಬಟ್ಟೂರ, ವ್ಯವಸಾಯ ಸಹಕಾರಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಕೆಂಚನಗೌಡ್ರ, ಜೆಡಿಎಸ್ ಯುವದುರೀಣ ಶಿವು ಹೊಂಬಳ ಜಂಟಿಯಾಗಿ ನೀಡಿರುವ ಪ್ರಕಟಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗ್ರಾಮದ ರೈತ ಮುದಕಪ್ಪ ತುಕ್ಕಣ್ಣವರ ಅವರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ.