ಮಹಿಳಾ ಮಣಿಗಳೇ ನಿರ್ಣಾಯಕರು
ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 28
ಧಾರವಾಡ ಜಿಲ್ಲೆಯಾದ್ಯಂತ ಮಹಿಳಾ ಮತದಾರರು ಜಾಗೃತರಾಗಿದ್ದಾರೆಯೇ? ಹೌದು ಎನ್ನುತ್ತದೆ ಮತದಾರರ ಪಟ್ಟಿ.
ನಿಜ, ಜಿಲ್ಲೆಯ ಮತದಾರರ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಅಂಶ ಗಮನ ಸೆಳೆಯುತ್ತದೆ. ಮತದಾರರ ಯಾದಿ ಪರಿಷ್ಕೃತವಾದ ಕಾಲಕ್ಕೆಲ್ಲ ಮಹಿಳಾ ಮತದಾರರ ಸಂಖ್ಯೆ ಹೆಚ್ಚುತ್ತಾ ಹೋಗಿದೆ. ಇನ್ನೊಂದು ಬಾರಿ ಮತದಾರರ ಯಾದಿ ಪರಿಷ್ಕೃತವಾದಲ್ಲಿ ಮಹಿಳೆಯರು ಪುರುಷರನ್ನು ಹಿಂದಿಕ್ಕಿ ಮತಪಟ್ಟಿಯಲ್ಲಿಯೂ ಮೇಲುಗೈ ಸಾಧಿಸುವುದರಲ್ಲಿ ಸಂದೇಹವೇ ಇಲ್ಲ.
ಕ್ಷೇತ್ರವಾರು ಮಹಿಳಾ ಮತದಾರರು: ಧಾರವಾಡ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರವಾರು ಪುರುಷ ಮತ್ತು ಮಹಿಳಾ ಮತದಾರರ ಅಂಕಿ ಸಂಖ್ಯೆ ಅವಲೋಕಿಸಿದಾಗ, ಪುರುಷ ಮತದಾರರ ಹಾಗೂ ಮಹಿಳಾ ಮತದಾರರು ಬಹುತೇಕ ಸರಿಸಮಾನವಾಗಿರುವುದು ಕಂಡುಬರುತ್ತದೆ. ಜಿಲ್ಲೆಯಾದ್ಯಂತ ಒಟ್ಟು 12,71,710 ಮತದಾರರಿದ್ದರೆ ಈ ಪೈಕಿ 6,50,186 ಪುರುಷ ಹಾಗೂ 6,21,524 ಮಹಿಳಾ ಮತದಾರರಿದ್ದಾರೆ. ಅಂದರೆ, ಮಹಿಳಾ ಮತದಾರರು ಹಾಗೂ ಪುರುಷ ಮತದಾರರ ನಡುವಿರುವ ಅಂತರ ಕೇವಲ 28,662.
ಕ್ಷೇತ್ರವಾರ ಮತದಾರರ ಸಂಖ್ಯೆಯ ಮೇಲೆ ಗಮನ ಹರಿಸಿದಾಗ, ನವಲಗುಂದ ವಿಧಾನಸಭೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,81,384 ಆಗಿದ್ದರೆ ಈ ಪೈಕಿ 93,217 ಪುರುಷ ಹಾಗೂ 88,167 ಮಹಿಳಾ ಮತದಾರರಿರುವುದು ಗಮನಕ್ಕೆ ಬರುತ್ತದೆ. ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ 1,63,860 ಮತದಾರರಿದ್ದರೆ, 85,434 ಪುರುಷ ಹಾಗೂ 78,426 ಮಹಿಳಾ ಮತದಾರರಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ 1,78,764 ಮತದಾರರಿದ್ದರೆ 91,048 ಪುರುಷ ಹಾಗೂ 87,716 ಮಹಿಳಾ ಮತದಾರರಿದ್ದಾರೆ. ಹು-ಧಾ ಪೂರ್ವ ಕ್ಷೇತ್ರದ 1,68,523 ಮತದಾರರ ಪೈಕಿ 85,589 ಪುರುಷ ಹಾಗೂ 82,934 ಮಹಿಳಾ ಮತದಾರರಿದ್ದಾರೆ. ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿರುವ 1,99,523 ಮತದಾರರಲ್ಲಿ 1,00,899 ಪುರುಷ, 98,624 ಮಹಿಳೆಯರು. ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ 2,14,388 ಮತದಾರರ ಪೈಕಿ 1,07,997 ಪುರುಷ ಹಾಗೂ 1,06,391 ಮಹಿಳಾ ಮತದಾರರಿರುವುದು ಕಂಡು ಬಂದಿದೆ.
ಕಲಘಟಗಿ ವಿಧಾನಸಭೆ ಕ್ಷೇತ್ರದಲ್ಲಿ 1,65,268 ಮತದಾರರಿದ್ದು 86,002 ಪುರುಷ ಹಾಗೂ 79,266 ಮಹಿಳಾ ಮತದಾರರಿದ್ದಾರೆ. ಹೀಗೆ ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿಯೂ ಮಹಿಳಾ ಮತದಾರರು ಪುರುಷರಿಗೆ ಸರಿಗಟ್ಟುವ ಅಸುಪಾಸಿನಲ್ಲಿದ್ದಾರೆ.
ಮಹಿಳೆಯರಲ್ಲಿ ಮೂಡಿದ ಜಾಗೃತಿ: ಹೀಗೆ ಮಹಿಳಾ ಮತದಾರರು ಸಂಖ್ಯೆ ಹೆಚ್ಚಿರುವುದಕ್ಕೆ ಕಾರಣ ಅವರಲ್ಲಿ ಜಾಗೃತಿ ಮೂಡಿರುವುದು. ಮತದಾನದ ಹಕ್ಕು ಪಡೆಯುವಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲಾ ಎನ್ನುವುದು ಈ ಅಂಕಿ-ಸಂಖ್ಯೆ ಸಾಬೀತು ಪಡಿಸುತ್ತದೆ. ಇನ್ನು ಸರ್ಕಾರಿ ಯೋಜನೆಗಳೇ ಆಗಿರಲಿ ಅಥವಾ ಸಾರ್ವಜನಿಕ ಸರ್ಕಾರಿ ಆದೇಶವೇನಾದರೂ ಹೊರ ಬಿದ್ದಿದೆ ಎಂದಾದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವವರೇ ಮಹಿಳೆಯರು. ಉದಾಹರಣೆಗೆ ರೇಷನ ಕಾರ್ಡ್, ಆಧಾರ ಕಾರ್ಡ್ ಸೇರಿದಂತೆ ಇನ್ನಿತರ ಯೋಜನೆಯ ಲಾಭ ಪಡೆಯಲು ಸರ್ಕಾರಿ ಕಚೇರಿಗಳ ಮುಂದೆ ಮೊದಲು ಹಾಜರಾಗುವವರೇ ಮಹಿಳೆಯರು. ಹೀಗಾಗಿ ಮತದಾನದ ಹಕ್ಕು ಪಡೆಯುವಲ್ಲಿಯೂ ಮಹಿಳೆಯರೇ ಮುಂದಿದ್ದಾರೆ. ಈ ವಿಷಯದಲ್ಲಿ ಪುರುಷರು ಉದಾಸೀನ ತೋರುತ್ತಿರುವುದಂತೂ ಸುಳ್ಳಲ್ಲ.
ಮಹಿಳೆಯರೇ ನಿರ್ಣಾಯಕರು: ಈ ಅಂಕಿ-ಸಂಖ್ಯೆ ಮೇಲೆ ಕಣ್ಣಾಡಿಸಿದಾಗ ಚುನಾವಣೆಯಲ್ಲಿ ಮಹಿಳಾ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆಂಬುದು ತಿಳಿದು ಬರುತ್ತದೆ. ಮತದಾನವನ್ನು ಪರಿಗಣನೆಗೆ ತೆಗೆದುಕೊಂಡಾಗ ಮಹಿಳೆಯರು ಮತದಾನ ಮಾಡಲು ಹೆಚ್ಚಿನ ಆಸಕ್ತಿ ಹಾಗೂ ಜವಾಬ್ದಾರಿ ತೋರುತ್ತಾರೆಂಬುದು ಕಂಡುಬರುತ್ತದೆ. ಹೀಗಿದ್ದಾಗ ಯಾವುದೇ ಒಂದು ಪಕ್ಷದ ಭವಿಷ್ಯ ನಿರ್ಧರಿಸುವ ಕ್ಷಮತೆಯೂ ಮಹಿಳೆಯರ ಬಳಿ ಇದ್ದಂತಾಯಿತು. ತನ್ಮೂಲಕ ಧಾರವಾಡ ಜಿಲ್ಲೆಯ ಮಟ್ಟಿಗೆ ಮಹಿಳಾ ಮತದಾರರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ.
ನಿರ್ಣಾಯಕ....
ಧಾರವಾಡ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರವಾರು ಪುರುಷ ಮತ್ತು ಮಹಿಳಾ ಮತದಾರರ ಅಂಕಿ ಸಂಖ್ಯೆ ಅವಲೋಕಿಸಿದಾಗ, ಪುರುಷ ಮತದಾರರ ಹಾಗೂ ಮಹಿಳಾ ಮತದಾರರು ಬಹುತೇಕ ಸರಿಸಮಾನವಾಗಿರುವುದು ಕಂಡು ಬರುತ್ತದೆ. ಜಿಲ್ಲೆಯಾದ್ಯಂತ ಒಟ್ಟು 12,71,710 ಮತದಾರರಿದ್ದರೆ ಈ ಪೈಕಿ 6,50,186 ಪುರುಷ ಹಾಗೂ 6,21,524 ಮಹಿಳಾ ಮತದಾರರಿದ್ದಾರೆ. ಅಂದರೆ ಮಹಿಳಾ ಮತದಾರರು ಹಾಗೂ ಪುರುಷ ಮತದಾರರ ನಡುವಿರುವ ಅಂತರ ಕೇವಲ 28,662. ತನ್ಮೂಲಕ ಧಾರವಾಡ ಜಿಲ್ಲೆಯ ಮಟ್ಟಿಗೆ ಮಹಿಳಾ ಮತದಾರರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆಂದಾಯಿತು.