ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಒಡೆದು ಹೋಳಾದ ಬಿಜೆಪಿ ಕಾರ್ಯಕರ್ತರು!

Rashmi Kasaragodu
Updated On : 31 Mar 2013, 11:55 am

ಶೀತಲ ಎಸ್. ಮುರಗಿ
ಕುಂದಗೋಳ: ರಾಜ್ಯದಲ್ಲಿ ಬಿಜೆಪಿಯ ಚೊಚ್ಚಲ ಸರ್ಕಾರ ಸ್ವಂತ ಬಲದಿಂದ ಅರಳಿದ್ದು, ಅದು ಬಹಳ ದಿನ ಉಳಿಯದೇ 3 ಭಾಗವಾಗಿ ಛಿದ್ರಗೊಂಡು ಅದರ ಕರಿನೆರಳು ಕುಂದಗೋಳ ತಾಲೂಕಿನಲ್ಲಿಯೂ ಬೀರಿ ಬಿಜೆಪಿ  ಕಾರ್ಯಕರ್ತರು ಯಾವ ಪಕ್ಷಕ್ಕೆ ಬೆಂಬಲಿಸಬೇಕೆಂಬ ಗೊಂದಲದಲ್ಲಿದ್ದಾರೆ.
ರಾಜ್ಯದ ಬಿಜೆಪಿಯಲ್ಲಿ ಬಿಎಸ್ಆರ್, ಕೆಜೆಪಿ ಮತ್ತು ಬಿಜೆಪಿಗಳೆಂದು ಹೊರಹೊಮ್ಮಿ ಅವುಗಳೊಂದಿಗೆ ತಾಲೂಕಿನ ಬಿಜೆಪಿ ಹಿರಿಯ ಮುಖಂಡರು ಹರಿದು ಹಂಚಿದಂತಾಗಿದ್ದಾರೆ.
ಸ್ಥಳಿಯ ಶಾಸಕ ಎಸ್.ಐ. ಚಿಕ್ಕನಗೌಡರ ಬಿಜೆಪಿ ತೊರೆದು ಕೆಜೆಪಿಗೆ ಸೇರಿ ಅಲ್ಲಿಂದ ಕಣಕ್ಕಿಳಿಯುತ್ತಿದ್ದಾರೆ. ಮೂಲತಃ ಬಿಜೆಪಿಯಲ್ಲಿ ಗುರುತಿಸಿಕೊಂಡು ಒಟ್ಟು 3 ಬಾರಿ ಶಾಸಕನಾಗಿ ಈ ಸಲ ಬಿಜೆಪಿ ನಂಟು ಬಿಟ್ಟು ತಮ್ಮ ನೆಂಟರ ಪಕ್ಷ ಸೇರಿದ್ದು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದಾರೆ.
ಇನ್ನೋರ್ವ ಮುಖಂಡ ಹಾಗೂ ಮಾಜಿ ಶಾಸಕ ಎಂ.ಎಸ್. ಅಕ್ಕಿ ಒಂದು ಬಾರಿ ಜನತಾದಳದಿಂದ ಆಯ್ಕೆಯಾಗಿ ಮತ್ತೆ ಜೆಡಿಯು ಮತ್ತು ಬಿಜೆಪಿ ಹೊಂದಾಣಿಕೆ ಮೂಲಕ ಎರಡನೇ ಬಾರಿ ಆಯ್ಕೆಯಾಗಿ ಬಿಜೆಪಿ ಕಾರ್ಯಕರ್ತರೊಂದಿಗೆ ತಮ್ಮ ಸಂಬಂಧ ಬೆಳೆಸಿದರು.
ನಂತರದ ರಾಜಕೀಯ ಬದಲಾವಣೆಯಿಂದ ಎಂ.ಎಸ್. ಅಕ್ಕಿಯವರ ನಾಯಕರಾದ ಬಸವರಾಜ ಬೊಮ್ಮಾಯಿಯರೊಂದಿಗೆ ಬಿಜೆಪಿ ಸೇರ್ಪಡೆಯಾದರು. ಆದರೆ, ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭ ಕ್ಷೇತ್ರ ವಿಂಗಡನೆಯಿಂದ ಕಲಘಟಗಿ ಮತಕ್ಷೇತ್ರದ ಅದರಗುಂಚಿ ಸೇರಿ ಒಟ್ಟು 32 ಗ್ರಾಮಗಳು ಕುಂದಗೋಳ ಮತಕ್ಷೇತ್ರಕ್ಕೆ ಸೇರಿದ್ದರಿಂದ ಬಿಜೆಪಿ ಅಭ್ಯರ್ಥಿಯಾಗುವಲ್ಲಿ ವಂಚಿತರಾದರು. ಆದರೆ, ಎಂ.ಎಸ್. ಅಕ್ಕಿಯವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರೆಯದೆ ಬೇಸತ್ತು ಜೆಡಿಎಸ್ ಸೇರಿ, ಈ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
ಮತ್ತೋರ್ವ ಮುಖಂಡರಾದ ಎಂ.ಆರ್. ಪಾಟೀಲರು ಮೂಲತಃ ಬಿಜೆಪಿಯಿಂದ ಬೆಳೆದು ಅವಕಾಶಕ್ಕಾಗಿ ಯಾವ ಪಕ್ಷದೆಡೆ ಮುಖಮಾಡದೇ ತವರು ಪಕ್ಷದಲ್ಲಿಯೇ ಉಳಿದು ಅದನ್ನೇ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಇವರೇ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಬಹುತೇಕ ಖಚಿತವಾಗಿದ್ದು, ಈಗಾಗಲೇ ಸಂಘಟನೆ ಜೋರಾಗಿಯೇ ನಡೆಸಿದ್ದಾರೆ. ಆದರೆ, ಈ ನಾಯಕರೆಲ್ಲ ಬಿಜೆಪಿ ಕಾರ್ಯಕರ್ತರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದು, ಕಾರ್ಯಕರ್ತರೀಗ ಯಾರನ್ನು ಬೆಂಬಲಿಸಬೇಕೆಂಬ ಗೊಂದಲದಲ್ಲಿದ್ದಾರೆ.
ಬಿಜೆಪಿಯಲ್ಲಿ ಎಂ.ಆರ್. ಪಾಟೀಲ ಸಾಮಾನ್ಯ ಕಾರ್ಯಕರ್ತನಾಗಿ ಸಾಕಷ್ಟು ಶ್ರಮಿಸಿದ್ದಾರೆ. ಕಾರ್ಯಕರ್ತರೊಂದಿಗೆ ಬೆರೆತು ಪಕ್ಷದ ಸಂಘಟನೆಗೆ ಹಗಲಿರುಳು ದುಡಿದು ಮತ್ತು ಹಿಂದುತ್ವದ ಅಲೆಯಲ್ಲಿ ಸಾಕಷ್ಟು ಕಾರ್ಯಕರ್ತರು ಜೈಲಿನಲ್ಲಿದ್ದಾಗ ಅವರಿಗೆ ಧೈರ್ಯ ತುಂಬಿ ಸೌಜನ್ಯ ತೋರಿದ್ದಾರೆ. ಮಾಜಿ ಶಾಸಕ ಎಂ.ಎಸ್. ಅಕ್ಕಿ ಜೆಡಿಯು ಹಾಗೂ ಬಿಜೆಪಿಯೊಡನೆ ಒಳ್ಳೆಯ ಬಾಂಧವ್ಯ ಹೊಂದಿದ್ದು, 2 ಬಾರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇನ್ನೊರ್ವ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಕುಂದಗೋಳ ವಿಧಾನಸಭಾ ಬಿಜೆಪಿಯಲ್ಲಿ 3 ಭಾಗವಾಗಿದ್ದು, ಕಾರ್ಯಕರ್ತರು ಮುಖಂಡರು ಯಾರನ್ನು ಬೆಂಬಲಿಸುತ್ತಾರೆ ಎಂಬುದು ನಿಗೂಢವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement