ಕಟ್ಟಡದಿಂದ ಬಿದ್ದು ಸಾವು
ಹುಬ್ಬಳ್ಳಿ: ಅಪಾರ್ಟಮೆಂಟ್ವೊಂದರ ನಾಲ್ಕನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೈರಿದೇವರಕೊಪ್ಪದ ಜ್ಯೋತಿಬಾ ಮಾರುತಿ ಶಿಂಧೆ (40) ಎಂಬುವನೇ ಮೃತಪಟ್ಟ ದುರ್ದೈವಿ ಕಾರ್ಮಿಕ. ಶುಕ್ರವಾರ ಬೆಳಗ್ಗೆ ಅಪಾರ್ಟಮೆಂಟ್ನಲ್ಲಿ ಕೆಲಸ ಮಾಡುತ್ತಿರುವಾಗ ಮಾರುತಿ ಕಳೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಉಪಚಾರ ಫಲಿಸದೇ ರಾತ್ರಿ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಕುರಿತಂತೆ ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ
ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಂಗೇದೇವರಕೊಪ್ಪ ಗ್ರಾಮದ ಸಂಗಪ್ಪ ಪೀರಪ್ಪ ಹರಿಜನ ಎಂಬುವವನ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ ಆಗುವುದಾಗಿ ನಂಬಿಸಿ ಆರೋಪಿ, ತನ್ನ ಮಗಳನ್ನು ಪುಸಲಾಯಿಸಿ ಗದಗ-ಬೆಟಗೇರಿಗೆ ಅಪಹರಿಸಿಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿಯ ತಂದೆ ಯಲ್ಲಪ್ಪ ಸಂಗಪ್ಪ ಚಿಮಣಿ ಎಂಬುವವರು ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಸಬಾಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಸಾವು
ಅಣ್ಣಿಗೇರಿ: ಸಮೀಪದ ಕಾಲವಾಡ ಗ್ರಾಮದಲ್ಲಿ ಮಾ. 26ರಂದು ರಾತ್ರಿ 35 ವಯಸ್ಸಿನ ವ್ಯಕ್ತಿಯೋರ್ವ ವಾಂತಿ ಭೇದಿಯಿಂದ ಅಸ್ವಸ್ಥಗೊಂಡು ಮಾ. 27ರಂದು ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಶವವನ್ನು ಏ. 1ರಂದು ಕಿಮ್ಸ್ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿದ್ದು, ಸಂಬಂಧಿಸಿದ ವಾರುಸುದಾರರು ಇದ್ದಲ್ಲಿ ಕೂಡಲೇ ಅಣ್ಣಿಗೇರಿ ಆರಕ್ಷಕ ಠಾಣೆ -08380-222733, 9480804349, ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್, ನವಲಗುಂದ - 08380-229333, 9480804331, ಪೊಲೀಸ್ ಕಂಟ್ರೋಲ್ ರೂಂ ಧಾರವಾಡ-0836-2233201ಗೆ ಸಂಪರ್ಕಿಸಲು ಕೋರಲಾಗಿದೆ.