ಕುಡುಕರಿಗೆ, ವೇಶ್ಯಾವಾಟಿಕೆಗೆ ಬಸ್ ನಿಲ್ದಾಣ
ಸತೀಶ ಪಾಗಾದ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 30
ಹೆಸರಿಗಷ್ಟೆ ಇದು ಸರ್ಕಾರಿ ಲಾಡ್ಜ್, ಬೆಳಗಿನಲ್ಲಿ ಕುಡುಕರಿಗೆ ವಿಶ್ರಾಂತಿ ತಾಣ, ಹಾದಿ ಬೀದಿ ವೇಶ್ಯಾವಾಟಿಕೆ ಚಟುವಟಿಕೆಗೆ ಹೇಳಿ ಮಾಡಿಸಿದ ಜಾಗ.
ಆಶ್ಚರ್ಯದ ಸಂಗತಿ ಏನೆಂದರೆ ಇದು ನಗರದ ಅತ್ಯಂತ ಜನಸಂದಣಿ ಮತ್ತು ಹಗಲು ರಾತ್ರಿ ಪ್ರಯಾಣಿಕರು ಬರುವ ಹೋಗುವ ಸ್ಥಳದಲ್ಲಿಯೇ ಇದೆ. ಆದರೂ ಅಧಿಕಾರಿಗಳಿಗೆ ಗೊತ್ತಿಲ್ಲ ಎನ್ನುತ್ತಾರೆ. ಎಲ್ಲಿ ಅಂತಿರಾ? ಇದು ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ಮೇಲಂತಸ್ತು ಇಂತಹ ಅನೈತಿಕ ಚಟುವಟಿಕೆಗಳ ತಾಣ.
ಪ್ರಯಾಣಿಕರ ಅನುಕೂಲಕ್ಕೆ ಎಂದು ಅಂದಿನ ಕೆಸ್ಸಾರ್ಟಿಸಿ ನಿರ್ಮಿಸಿದ್ದ ಲಾಡ್ಜ್ ಇಂದು ಉಪಯೋಗಕ್ಕಿಲ್ಲ. ಇಡೀ ಮೇಲಂತಸ್ತನ್ನು ಸುತ್ತಿದರೆ ಅಲ್ಲಿ ಸಿಗುವುದು ಸಾರಾಯಿ ಬಾಟಲಿಗಳು ಬಳಸಿ ಬೀಸಾಡಿದ ಕಾಂಡೋಮ್ಗಳು, ಕ್ಷಣ ಸುಖಕ್ಕಾಗಿ ಕರೆ ತಂದವರೊಂದಿಗೆ ತಿನ್ನುವುದು ಕುಡಿಯುವುದು ಮಾಡುವುದಕ್ಕೆ ತಂದ ಪಾರ್ಸಲ್ಗಳ ಯಥೆಚ್ಛ ಪ್ಲಾಸ್ಟಿಕ್ ರಾಶಿ ಮತ್ತು ಬಾಟಲಿಗಳು. ಕಳೆದ ಹಲವಾರು ವರ್ಷಗಳಿಂದ ಖಾಲಿ ಬಿದ್ದ ಈ ಜಾಗವನ್ನು ಅದ್ಯಾರೋ ಕುಡುಕ ಪುಣ್ಯಾತ್ಮರಿಗೆ ವಿಪರೀತ ನಶೆ ಏರಿಸಿಕೊಂಡು ಮಲಗುವುದಕ್ಕೆ ಸರಿಯಾದ ಜಾಗವಾಗಿ ಕಂಡಿದ್ದು, ನಂತರದ ದಿನಗಳಲ್ಲಿ ಹಳೇ ಬಸ್ ನಿಲ್ದಾಣ ಮತ್ತು ಜನತಾ ಬಜಾರ್ ಸುತ್ತ ನಡೆಯುವ ವೇಶ್ಯಾವಾಟಿಕೆಗೆ ಈ ಸ್ಥಳ ಅಂದಿನಿಂದ ಇಂದಿನವರೆಗೆ ಎಗ್ಗಿಲ್ಲದೆ ನಡೆಯುತ್ತ ಬಂದಿದೆ.
ಇಲ್ಲಿ ಎಗ್ಗಿಲ್ಲದೇ ನಡೆಯುವ ಅನಧಿಕೃತ ಚಟುವಟಿಕೆ ಬಗ್ಗೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕೆಲವು ಸಭ್ಯ ನೌಕರರು ಕೂಡ ಬೇಸರ ವ್ಯಕ್ತಪಡಿಸುತ್ತಾರೆ. ಏನು ಮಾಡುದ್ರಿ, ಹಗಲಿನ್ಯಾಗ ಪುಲ್ ಟೈಟ್ ಆಗಿ ಬಂದ್ ಮಲ್ಕೋಳ್ತಾರ, ರಾತ್ರಿ ನೋಡಿದ್ರ ಅದರ ಕಥೀನ ಬ್ಯಾರೇ ಇರ್ತದ. ಐವತ್ತು, ನೂರುಗಳಿಗೆ ಮೈ ಮಾರಿಕೊಳ್ಳುವವರಿಗೆ ಮತ್ತು ಅಂತಹವರನ್ನು ಹುಡುಕಿಕೊಂಡು ಹೋಗುವವರಿಗೆ ಇದು ಪ್ರಶಸ್ತವಾಗಿದೆ. ರಾತ್ರಿಯಾದ ಮೇಲೆ ಲೈಟೂ ಇರುವುದಿಲ್ಲ. ಹೀಗಾಗಿ ಯಾರು ಯಾವಾಗ ಒಳಗೆ ಸೇರಿಕೋಳ್ತಾರ ಎಂದು ನೋಡಲಿಕ್ಕೂ ಆಗುವುದಿಲ್ಲ ಎನ್ನುತ್ತಾರೆ ತಾತ್ಕಾಲಿಕವಾಗಿ ಒಂದೋ, ಎರಡೋ ರೂಮುಗಳನ್ನು ತಮ್ಮ ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಂಡವರು.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ನಂಜಯ್ಯ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ಇಲ್ಲಿನ ಅನೈತಿಕ ಚಟುವಟಿಕೆ ನಿಯಂತ್ರಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ನಾಳೆಯಿಂದಲೇ ಇಲ್ಲಿ ಕುಡುಕರು ವಿಶ್ರಾಂತಿ ಪಡೆಯುವುದಿಲ್ಲ ಇನ್ನಿತರ ಅನೈತಿಕ ಚಟುವಟಿಕೆನಡೆಯುವುದಿಲ್ಲ ಎಂದಿದ್ದಾರೆ.
ಆದಾಯಕ್ಕೆ ಖೋತಾ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮೇಲಂತಸ್ತನ್ನು ಸರಿಯಾಗಿ ಬಳಸಿಕೊಂಡಿದ್ದರೆ ಪ್ರಯಾಣಿಕರಿಗೂ ಮತ್ತು ಸಂಸ್ಥೆಗೂ ಅನುಕೂಲವಾಗುತ್ತಿತ್ತು. ಬೆಂಗಳೂರು ಬಸ್ ನಿಲ್ದಾಣದಲ್ಲಿರುವ ಯಾತ್ರಿ ನಿವಾಸದಂತೆಯೇ ಸದಾಕಾಲ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಅಧಿಕಾರಿಗಳ ಹೊಣಗೇಡಿತನಕ್ಕೆ ಉತ್ತರವಿಲ್ಲ. ಅಧಿಕಾರಿಗಳ ಹೊಣಗೇಡಿತನಿಂದಾಗಿ ಸಂಸ್ಥೆಗೆ ಟೆಂಡರ್ ರೂಪದಲ್ಲಿ ದಕ್ಕಬೇಕಿದ್ದ ರು. ಲಕ್ಷಾಂತರ ಆದಾಯಕ್ಕೆ ಕತ್ತರಿ ಬಿದ್ದಿದೆ. ಈ ಕುರಿತು ಎನ್ಡಬ್ಲ್ಯೂಕೆಆರ್ಟಿಸಿ ಡಿಸಿ ನಂಜಯ್ಯ ಅವರನ್ನು ಕೇಳಿದರೆ ಇದೀಗ ಚುನಾವಣಾ ನೀತಿ ಸಂಹಿತೆ ಇದೆ. ಹೀಗಾಗಿ ಏನೂ ಮಾಡಲಿಕ್ಕಾಗುವುದಿಲ್ಲ. ಚುನಾವಣೆ ನಂತರ ಟೆಂಡರ್ ಕರೆದು ಯೋಗ್ಯ ಗುತ್ತಿಗೆದಾರರಿಗೆ ನಿಲ್ದಾಣದ ಮೇಲಂತಸ್ತನ್ನು ನೀಡಲಾಗುವುದು.
ಇಲ್ಲಿಯವರೆಗೆ ಏನು ಮಾಡ್ತಿದ್ದೀರಿ?: ಈ ಪ್ರಶ್ನೆಯನ್ನು ಕನ್ನಡಪ್ರಭ ಮುಂದೆ ಇರಿಸಿದರೆ ನಂಜಯ್ಯ ಅವರಿಂದ ಇದಕ್ಕೆ ಉತ್ತರವಿಲ್ಲ. ಕೆಲವು ವರ್ಷಗಳ ಇದೇ ಅಂತಸ್ತನ್ನು ಗುತ್ತಿಗೆ ಆಧಾರದ ಮೇಲೆ ಪಡೆದವರು ವೈಷ್ಣವಿ ಲಾಡ್ಜ್ ಹೆಸರಿನಲ್ಲಿ ನಡೆಸುತ್ತಿದ್ದರು. ಅವರ ಟೆಂಡರ್ ಅವಧಿ ಪೂರ್ಣಗೊಂಡ ನಂತರ ಮತ್ತೆ ಎನ್ಡಬ್ಲ್ಯೂಕೆಆರ್ಟಿಸಿ ಟೆಂಡರ್ ಕರೆದು ಜಾಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಿಂತನೆ ಮಾಡಿಲ್ಲ. ದಿನೇ ದಿನೇ ಬೆಳೆದು ಮಡುಗಟ್ಟಿದ ಧೂಳು ಮತ್ತು ಅವ್ಯವಸ್ಥೆ ಅದು ಹೇಗೋ ಕುಡುಕರ ಮತ್ತು ವಿಟ ಪುರುಷರ ಕಣ್ಣಿಗೆ ಬಿದ್ದ ಮೇಲೆ ಪ್ರತಿನಿತ್ಯ ಅನೈತಿಕ ಚಟುವಟಿಕೆ ನಡೆಯುವುದು ಆರಂಭಗೊಂಡಿವೆ.
ಹಲವರಿಗೆ ಅನುಕೂಲವಾಗುತ್ತಿತ್ತು: ಹುಬ್ಬಳ್ಳಿ ನಗರಕ್ಕೆ ಸಂದರ್ಶನಕ್ಕೆ ಬರುವ ನಿರುದ್ಯೋಗಿಗಳು, ಮಾರಾಟ ಪ್ರತಿನಿಧಿಗಳಿಗೆ ಈ ಲಾಡ್ಜ್ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅನುಕೂಲವಾಗುತ್ತಿತ್ತು. ರು. 50ಗಳಲ್ಲಿ ಸ್ನಾನ, ಶೌಚ ಮುಂತಾದ ನಿತ್ಯ ಕ್ರಿಯೆಗಳನ್ನು ಮುಗಿಸಿಕೊಂಡು ಸಂದರ್ಶನಕ್ಕೊ, ಕೆಲಸಕ್ಕೊ ಹಾಜರಾಗಿ ಸಂಜೆ ಹೊತ್ತಿಗೆ ಬಸ್ ಹಿಡಿದು ಹೋಗುವವರಿಗೆ ಹಣ ಉಳಿತಾಯವಾಗುತ್ತಿತ್ತು. ಆದರೆ ಎನ್ಡಬ್ಲ್ಯೂಕೆಆರ್ಟಿಸಿ ಅಧಿಕಾರಿಗಳ ಪರಮಾವಧಿ ಹೊಣಗೇಡಿತನ ರು. ಕೋಟ್ಯಂತರ ಬೆಲೆ ಬಾಳುವ ಆಸ್ತಿಯೊಂದು ಯಾವ ಪರಿ ಹಾನಿಗೀಡಾಗಿದೆ ಎಂದರೆ ಊಹಿಸಲು ಸಾಧ್ಯವಿಲ್ಲದಂತಾಗಿದೆ.