ಬೆನ್ನುಹುರಿ ಕ್ಷಯರೋಗಕ್ಕೆ ಶಸ್ತ್ರಚಿಕಿತ್ಸೆ ಯಶಸ್ವಿ
ಹುಬ್ಬಳ್ಳಿ: ಬೆನ್ನುಹುರಿಗೆ ತಗುಲಿದ ಕ್ಷಯರೋಗದಿಂದಾಗಿ ಕೈ-ಕಾಲುಗಳಲ್ಲಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದ 45 ವರ್ಷದ ಮಹಿಳೆಯನ್ನು ಆಧುನಿಕ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಶ್ರೀ ಬಾಲಾಜಿ ಆಸ್ಪತ್ರೆ ವೈದ್ಯರು ಸಂಪೂರ್ಣ ಗುಣಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಆಸ್ಪತ್ರೆ ಅಧ್ಯಕ್ಷ, ನರರೋಗ ತಜ್ಞ ಡಾ. ಕ್ರಾಂತಿಕಿರಣ, ಬೆನ್ನುಹುರಿ ಕ್ಷಯರೋಗ ಸಾಮಾನ್ಯ ಕಾಯಲೆಯಾಗಿದ್ದರೂ ಇದನ್ನು ಅಲಕ್ಷಿಸಿದ್ದಲ್ಲಿ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಇಂಥ ಕಾಯಿಲೆಯಿಂದ ಬಳಲುತ್ತಿರುವ ಹುಬ್ಬಳ್ಳಿ. ಶಕುಂತಲಾ ಮೋಹನ ಸವಣೂರ ಅವರನ್ನು ಸತತ 4 ಗಂಟೆಆಧುನಿಕ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಗುಣಪಡಿಸಿದೆ ಎಂದು ತಿಳಿಸಿದ್ದಾರೆ.
ಬೆನ್ನುಹುರಿಗೆ ಕ್ಷಯರೋಗ ತಗುಲಿದ ಪರಿಣಾಮ ಶಕುಂತಲಾ ಅವರ ಸೊಂಟದ ಭಾಗ, ಬೆನ್ನು ಮೂಳೆಗಳು ಬಹಳಷ್ಟು ಪ್ರಮಾಣದಲ್ಲಿ ಹಾನಿಗೊಂಡಿದ್ದವು. ಇದರಿಂದ ಅವರಿಗೆ ಸರಿಯಾಗಿ ನಡೆದಾಡಲು, ಕುಳಿತುಕೊಳ್ಳಲಾಗುತ್ತಿರಲಿಲ್ಲ. ನಿತ್ಯದ ಕರ್ಮಾಧಿಗಳನ್ನು ಹಾಸಿಗೆಯಲ್ಲೇ ಮಾಡಬೇಕಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ ಶಕುಂತಲಾ ಅವರನ್ನು ಎಂಆರ್ಐ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಿದಾಗ ಸೊಂಟದ ಭಾಗ, ಬೆನ್ನುಹುರಿಗೆ ತೀವ್ರತರದ ಅಪಾಯವಾಗಿರುವುದು ಕಂಡಿತು. ಈ ಕಾಯಿಲೆ ಗುಣಪಡಿಸಲು ಆಧುನಿಕ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ 2 ಬೆನ್ನು ಮೂಳೆಗಳ ನಡುವೆ 'ಲಂಬಾರಕೇಜ್' ಅಳವಡಿಸಿ, ಸೊಂಟದಲ್ಲಿ ಟೈಟಾನಿಯಂ ಸ್ಕ್ರೂ, ರಾಡ್ ಅಳವಡಿಸಿ ಬೆನ್ನು ಮೂಳೆಗಳಿಗೆ ಶಕ್ತಿ ನೀಡಲಾಗುತ್ತಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಪಿಎಲ್ಎಫ್ ವಿತ್ ಲಂಬಾರಕೇಜ್ ವಿತ್ ಮೋಸಿಸ್ ಮಿಯಾಮಿ ಎನ್ನುತ್ತಾರೆ ಎಂದು ಡಾ. ಕ್ರಾಂತಿಕಿರಣ ತಿಳಿಸಿದ್ದಾರೆ.
ಡಾ. ಕ್ರಾಂತಿಕಿರಣ, ಡಾ. ವಿಜಯ ಎಲಿವಾಳ, ಡಾ. ಶೀತಲ್ ಹಿರೇಗೌಡ್ರ ನೇತೃತ್ವದ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.