ಮತಾಧಿಕಾರವೇ ಜನಾಧಿಕಾರ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 30
ಪ್ರತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕೇವಲ ಶೇ. 55ರಿಂದ ಶೇ. 65ರಷ್ಟು ಮತ ಚಲಾವಣೆಯಾಗುತ್ತಿದ್ದು, ಇನ್ನುಳಿದ ಶೇ. 35ರಷ್ಟು ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅರ್ಹರೂ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಲ್ಲ.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಮೀರ ಶುಕ್ಲ ಶನಿವಾರ ನಗರದಲ್ಲಿ ಬಹಿರಂಗಗೊಳಿಸಿದ ಆತಂಕಕಾರಿ ವಿಷಯವಿದು.
ಇಲ್ಲಿನ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಜಿಲ್ಲಾಡಳಿತ ಶನಿವಾರ ಏರ್ಪಡಿಸಿದ್ದ 'ಮತಾಧಿಕಾರವೇ ಜನಾಧಿಕಾರ' ಎಂಬ ಜಿಲ್ಲಾಮಟ್ಟದ ಮತದಾರರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಮತ ಚಲಾವಣೆ ಹೆಚ್ಚಾಗಿಲ್ಲ. ಅದಕ್ಕಾಗಿ ಈ ಬಾರಿ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಮತ ಚಲಾವಣೆ ಕುರಿತು ಜನಜಾಗೃತಿ ಮೂಡಿಸಲು ಜಿಲ್ಲಾಮಟ್ಟದಲ್ಲಿ ಅಷ್ಟೇ ಅಲ್ಲ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಮತದಾರ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ವ್ಯಾಪಕವಾಗಿ ಭಾಗವಹಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ವೀಪ್ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ವಿವಿಧ ಇಲಾಖೆ ಅಧಿಕಾರಗಳು ಇದ್ದಾರೆ. ಜಾಗೃತಿ ಅಭಿಯಾನದಲ್ಲಿ ಸಮಿತಿ ಅಧಿಕಾರಿಗಳ ಜೊತೆಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತದಾರರಲ್ಲಿ ಜಾಗೃತಿ ಮೂಡಿಸಲು ಸಹಕಾರ ನೀಡಬೇಕು ಎಂದರು.
ಜಾಗೃತಿ ವೇಳೆ ಅಧಿಕಾರಿಗಳು ಹಾಗೂ ಕಾರ್ಯಕರ್ತೆಯರು ಯಾವುದೇ ಪಕ್ಷಕ್ಕೆ ಮತ ನೀಡುವಂತೆ ಒತ್ತಾಯಿಸಬಾರದು. ಒಂದು ವೇಳೆ ಮತದಾನ ಪ್ರಕ್ರಿಯೆಯಲ್ಲಿ ಜಾಗೃತಿ ಬಿಟ್ಟು ಪಕ್ಷ ಹಾಗೂ ವ್ಯಕ್ತಿಗತ ಪ್ರಚಾರ ಮಾಡಿದರೆ ಗಂಭೀರವಾಗಿ ಪರಿಗಣಿಸಲಾಗುವುದು. ಅಲ್ಲದೇ, ಮತದಾನ ಕುರಿತು ಜಾಗೃತಿಯಲ್ಲಿ ಭಾಗ ವಹಿಸುವಂತೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸಹ ಸಭೆಗೆ ಕರೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ಮತ ಚಲಾವಣೆಯಲ್ಲಿ ಹೆಚ್ಚು ಗುರಿ ಸಾಧಿಸಲು ಸಮಿತಿಯ ಎಲ್ಲ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲದೇ, ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಮತ ಚಲಾವಣೆಗೆ ಸಮಿತಿ ಸಕಲ ಸಿದ್ದತೆ ಮಾಡಿಕೊಂಡಿದ್ದು, ಸಾರ್ವಜನಿಕ ಸಹಕರಿಸಬೇಕು.
ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣವರ ಮಾತನಾಡಿ, ರಾಜ್ಯ ಚುನಾವಣಾ ಆಯೋಗ ರಚಿಸಿದ ಸ್ವೀಪ್ ಸಮಿತಿ ಜಿಲ್ಲೆಯಲ್ಲಿ ನೂರಕ್ಕೆ ನೂರಷ್ಟು ಮತ ಚಲಾವಣೆ ಮತ್ತು ನೂರಕ್ಕೆ ನೂರಷ್ಟು ಮತದಾರರನ್ನು ಮತದಾರ ಪಟ್ಟಿಯಲ್ಲಿ ಸೇರಿಸುವ ನಿರೀಕ್ಷೆ ಹೊಂದಿದೆ.
ಪ್ರತಿ ಮತಗಟ್ಟೆಯಲ್ಲಿ ಬಿಎಲ್ಓ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಮನೆ ಮನೆಗೆ ಹೋಗಿ ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ನಿರ್ದೇಶಿಸಲಾಗಿದೆ ಎಂದರು.
ತಾಲೂಕು, ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ಸ್ವೀಪ್ ಸಮಿತಿ ರಚಿಸಲಾಗುತ್ತಿದ್ದು, ತಹಸೀಲ್ದಾರರು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆ. ಅದರಂತೆ ಗ್ರಾಮಗಳಲ್ಲಿಯೂ ಸಮಿತಿ ರಚಿಸಲಾಗಿದ್ದು ಪಿಡಿಓ ಇದರ ಹೊಣೆಗಾರಿಕೆ ಹೊರಲಿದ್ದಾರೆ. ಈ ಸಮಿತಿಗಳು ಜನಜಾಗೃತಿ ಹಾಗೂ ಮತದಾರರ ಪಟ್ಟಿಯಲ್ಲಿ ಅರ್ಹರನ್ನು ಸೇರಿಸಲು ಶ್ರಮಿಸಬೇಕೆಂದು ತಿಳಿಸಲಾಗಿದೆ.
ಜನಸಾಂದ್ರತೆ ಹೆಚ್ಚಿರುವ ಪ್ರದೇಶದಲ್ಲಿ ಹೋರ್ಡಿಂಗ್ಗಳನ್ನು ಪ್ರದರ್ಶಸಲಾಗುತ್ತಿದೆ. ಪ್ರತಿ ತಾಲೂಕಿಗೂ ನೋಡೆಲ್ ಅಧಿಕಾರಗಳನ್ನು ನೇಮಿಸಲಾಗಿದ್ದು, ಯೋಜನೆ ಉಸ್ತುವಾರಿ ಹಾಗೂ ಅನುಷ್ಠಾನ ಖಾತ್ರಿ ಪಡಿಸಲು ಹೇಳಲಾಗಿದೆ. ಮತದಾರರು ತಮ್ಮ ಹೆಸರುಗಳನ್ನು ನೋಂದಾಯಿಸಲು ಏ. 7 ಕೊನೆಯ ದಿನವಾಗಿದೆ ಎಂದರು.
ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, ವಾರ್ತಾಧಿಕಾರಿ ಪಿ.ಎಸ್. ಪರ್ವತಿ ಇದ್ದರು. ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಎಸ್. ಪಾಟೀಲ ಹಾಗೂ ಮಹೇಶ ಕರ್ಜಗಿ ಮತದಾರರ ಜಾಗೃತಿ ಕುರಿತು ಉಪನ್ಯಾಸ ನೀಡಿದರು.