ಹೆಲ್ಮೆಟ್ ಧರಿಸದಿದ್ದಕ್ಕೆ ಬೈಕ್ ಸವಾರನಿಗೆ ಥಳಿಸಿದ ಪೊಲೀಸರು
ಹುಬ್ಬಳ್ಳಿ: ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ ಸಂಚಾರಿ ಪೊಲೀಸರು ಹಿಗ್ಗಾಮಗ್ಗಾ ಥಳಿಸಿ ಗಾಯಗೊಳಿಸಿದ ಘಟನೆ ಶನಿವಾರ ಮಧ್ಯಾಹ್ನ ಹಳೇ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಮೋದಿನಸಾಬ ಎಂಬ ಬೈಕ್ ಸವಾರನೇ ಪೊಲೀಸರಿಂದ ಹಲ್ಲೆಗೊಳಗಾಗಿದ್ದು, ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೈಕ್ ಮೇಲೆ ಹೊರಟಿದ್ದ ಮೋದಿನಸಾಬನನ್ನು ತಡೆದ ಸಂಚಾರಿ ಪೊಲೀಸರು ವಾಹನದ ದಾಖಲಾತಿ ಪರಿಶೀಲಿಸಿದ ನಂತರ, ಹಲ್ಮೆಟ್ ಧರಿಸದೇ ಇರುವುದು ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ 400 ದಂಡ ಭರಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದೇ ಕೇವಲ 100 ಭರಿಸುವುದಾಗಿ ಗಾಯಾಳು ಹೇಳಿದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇದರಿಂದ ಸಿಟ್ಟಿಗೆದ್ದ ನಾಲ್ಕೈದು ಸಂಚಾರಿ ಪೊಲೀಸರು ಕೂಡಿಕೊಂಡು ಬೈಕ್ ಸವಾರನನ್ನು ಮನಬಂದಂತೆ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಮೋದಿನಸಾಬ ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಉಪಚಾರಕ್ಕೆ ದಾಖಲಾಗಿದ್ದಾನೆ.