ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನದಿಗಳ ಜೋಡಣೆಗೆ ಇಚ್ಛಾಶಕ್ತಿ ಬೇಕು

Lingaraj Badiger
Updated On : 2 May 2013, 11:56 am

ಕನ್ನಡಪ್ರಭ ವಾತೆ, ಹುಬ್ಬಳ್ಳಿ, ಮೇ 1
ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವುದಕ್ಕೆ ಮತ್ತು ಧಾರವಾಡ, ನವಲಗುಂದ ತಾಲೂಕಿನ ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಕಾಳಿ-ಬೇಡ್ತಿ ಮತ್ತು ವರದಾ ನದಿಗಳ ಜೋಡಣೆಗೆ ರಾಜಕೀಯ ಇಚ್ಛಾಶಕ್ತಿ ತೋರಬೇಕು ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ನಗರದಿಂದ ಕೇವಲ 50 ಕಿ. ಮೀ. ಅಂತರದಲ್ಲಿದ್ದ ಕಾಳಿ ಮತ್ತು ಬೇಡ್ತಿ ನದಿಯ ವಿನಾಕಾರಣ ಸಮುದ್ರಕ್ಕೆ ಹರಿದು ಪೋಲಾಗುತ್ತಿರುವ ನೀರನ್ನು ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಉಪಯೋಗಿಸಿಕೊಳ್ಳಬಹುದು ಎಂದು ಹೇಳಿದರು.
ಈ ಕುರಿತು ಹುಬ್ಬಳ್ಳಿಗೆ ಪ್ರಧಾನಿ ಆಗಮಿಸಿದ್ದ ವೇಳೆ ಮನವಿ ಸಲ್ಲಿಸಿದ್ದು, ಆದಷ್ಟು ಬೇಗನೆಯ ಯೋಜನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಧಾನಿಗೆ ಮನವಿ ವಿನಂತಿಸಿಕೊಂಡಿದೆ. ಕಾಳಿ-ಬೇಡ್ತಿ ಮತ್ತು ವರದಾ ನದಿಗಳ ಜೋಡಣೆಗೆ ಸಂಬಂಧಿಸಿದಂತೆ 2005-06ರಲ್ಲಿ ರಾಷ್ಟ್ರೀಯ ಜಲಸಂಪನ್ಮೂಲ ಅಭಿವೃದ್ಧಿ ಪ್ರಾಧಿಕಾರ ರಾಷ್ಟ್ರೀಯ ದೂರದೃಷ್ಟಿ ಯೋಜನೆಯನ್ನು ರಾಜ್ಯ ಸರ್ಕಾರದೊಂದಿಗೆ ಸೇರಿ ಸಾಧ್ಯತಾ ವರದಿ ಸಿದ್ಧಪಡಿಸಿದೆ. ಆದರೆ ಸ್ಥಳೀಯರ ವಿರೋಧದ ಕಾರಣ ಯೋಜನೆಯನ್ನು ಆ ಹಂತದಲ್ಲಿಯೇ ಕೈಬಿಡಲಾಗಿದೆ. ಈ ನದಿಗಳ ಜೋಡಣೆಗೆ ಸಂಬಂಧಿಸಿದಂತೆ ಪರ್ಯಾಯ ಯೋಜನೆ ಸಿದ್ಧಪಡಿಸಿದ್ದು, ಈ ಯೋಜನೆಯಿಂದ ಸ್ಥಳೀಯರ ಭಾವನೆ ಮತ್ತು ಹಿತಾಸಕ್ತಿಗಳಿಗೆ ಧಕ್ಕೆ ಇಲ್ಲ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳ ನೀರನ್ನು ವರದಾ ನದಿ ಮೂಲಕ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಮತ್ತು ಕಲಘಟಗಿ, ಶಿಗ್ಗಾಂವಿ, ಸವಣೂರು ತಾಲೂಕುಗಳ ಕೆಲವು ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನಗರಕ್ಕೆ ಕುಡಿಯುವ ನೀರಿನ ಲಭ್ಯತೆ ಸಮಸ್ಯೆ ಪರಿಹರಿಸುವುದಕ್ಕೆ ಕೈಗೆತ್ತಿಕೊಳ್ಳಲಾಗಿರುವ ಕಳಸಾ-ಬಂಡೂರಿ ಯೋಜನೆ ಗೋವಾ ಸರ್ಕಾರದ ಆಕ್ಷೇಪಣೆ ವಿವಾದ ನ್ಯಾಯಾಧೀಕರಣದ ಮೆಟ್ಟಿಲೇರಿದ್ದು, ತೀರ್ಪು ಹೊರಬೀಳಬೇಕಾದರೆ ಸಾಕಷ್ಟು ವರ್ಷಗಳು ಬೇಕಾಗುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಳಿ, ಬೇಡ್ತಿ ಮತ್ತು ವರದಾ ನದಿಗಳ ಜೋಡಣೆಗೆ ಆದ್ಯತೆ ನೀಡಿದರೆ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಬಹುದು ಎಂದ್ದಿದ್ದಾರೆ.
ಈ ಸಂಬಂಧ ಪ್ರಧಾನಿಗೆ ಮನವಿ ಸಲ್ಲಿಸಲಾಗಿದೆ. ಈ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವ ಪವನಕುಮಾರ್ ಬನ್ಸಾಲ್ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಪತ್ರ ವ್ಯವಹಾರ ಮಾಡಿದ್ದು, ರಾಜ್ಯ ಸರ್ಕಾರ ಯೋಜನೆಯ ಜಾರಿಗೆ ಸಮ್ಮತಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಕೇಂದ್ರ ಜಲಸಂಪನ್ಮೂಲ ಅಭಿವೃದ್ಧಿ ಪ್ರಾಧಿಕಾರದಿಂದ ನದಿಗಳ ಜೋಡಣೆ ಕೆಲಸವನ್ನು ಕೇಂದ್ರ ಸಂಪೂರ್ಣ ವೆಚ್ಚ ಭರಿಸಿ ಕೈಗೆತ್ತಿಕೊಳ್ಳುವುದಕ್ಕೆ ಸಿದ್ಧವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳು ನಡೆದಿದ್ದರೂ ನನೆಗುದಿಗೆ ಬಿದ್ದಿವೆ. ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಅವರು ಈ ಯೋಜನೆಗೆ ಸ್ಥಳೀಯರ ವಿರೋಧವಿದೆ ಎಂದು ಹೇಳಿದ್ದಾರೆ. ಆದರೆ ಸ್ಥಳೀಯರಿಂದ ಏಕೆ ವಿರೋಧ ವ್ಯಕ್ತವಾಗುತ್ತಿದೆ ಎನ್ನುವುದಕ್ಕೆ ಕಾರಣ ನೀಡಿಲ್ಲ. ಕಾಳಿ ನದಿಯಿಂದ 225 ಟಿಎಂಸಿ ನೀರು, ಬೇಡ್ತಿ ನದಿಯಿಂದ 82 ಟಿಎಂಸಿ ನೀರು ಮತ್ತು ಆಘನಾಶಿನಿ ನದಿಯಿಂದ 122 ಟಿಎಂಸಿ ನೀರು ಅರಬ್ಬಿ ಸಮುದ್ರಕ್ಕೆ ಹರಿದು ಹೋಗುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ 16 ನದಿಗಳನ್ನು ಜೋಡಿಸಬೇಕು ಎಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಯೋಜನಾ ವರದಿ ಸಿದ್ಧಪಡಿಸಿದ್ದು ಅದರಲ್ಲಿ ಕರ್ನಾಟಕದಲ್ಲಿ ಕಾಳಿ-ಬೇಡ್ತಿ, ಬೇಡ್ತಿ-ವರದಾ ಹೀಗೆ ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿದ್ಧವಿದೆ. ಬನವಾಸಿ ಬಳಿ ವರದಾ ನದಿಗೆ ಬೇಡ್ತಿ ನದಿ ಜೋಡಿಸುವುದು ಸೂಕ್ತ ಎಂದು ಹೇಳಿದರು.
ಚುನಾವಣಾ ರಾಜಕೀಯದತ್ತ ತಿರುಗಿದ ಸಂವಾದದ ವೇಳೆ ಕುನ್ನೂರ ಅವರು, ಧಾರವಾಡ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೇನೆ. ರಾಜಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಸೇರಿಕೊಂಡು ಹು-ಧಾ ಪೂರ್ವ ಕ್ಷೇತ್ರದ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ, ಸೆಂಟ್ರಲ್ ಅಭ್ಯರ್ಥಿ ಡಾ. ಮಹೇಶ ನಾಲವಾಡ ಮತ್ತು ಕುಂದಗೋಳದಲ್ಲಿ ಸಿದ್ದರಾಮಯ್ಯ ಅವರ ಪ್ರಚಾರದಲ್ಲಿ ಪಾಲ್ಗೊಂಡಿದ್ದೇನೆ. ಲೋಕಸಭೆ ಕ್ಷೇತ್ರ ದೊಡ್ಡದು ಇರುವ ಕಾರಣ ಎಲ್ಲ ಕಡೆ ಪ್ರವಾಸ ಮಾಡುತ್ತಿದ್ದು, ಇದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ನಾನು ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಸ್ಪರ್ಧಾಕಾಂಕ್ಷಿ ಎಂದು ಎಲ್ಲೂ ಬಿಂಬಿಸಿಕೊಂಡಿಲ್ಲ. ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಇಚ್ಛಿಸಿದ್ದೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಯೋಗಾನಂದ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಮಾಡಳ್ಳಿ, ವಸಂತ ಲದವಾ, ಸತೀಶ ಮೆಹರವಾಡೆ, ರಾಜು ಕುನ್ನೂರ, ಫಿರಾಜೆ ಖಂಡೇಕಾರ್, ಮಹಾನಗರ ಪಾಲಿಕೆ ಸದಸ್ಯ ವಹಾಬ್ ಮುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement