ಪ್ರಧಾನಿ ನಿಷ್ಕ್ರಿಯತೆಗೆ ಶ್ರೀರಾಮ ಸೇನೆ ಖಂಡನೆ
ಹುಬ್ಬಳ್ಳಿ: ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಮೂಲದ ಕೈದಿ ಸರಬ್ಜಿತ್ ಸಿಂಗ್ ಮೇಲೆ ಸರ್ಕಾರಿ ಪ್ರಾಯೋಜಿತ ಮಾರಣಾಂತಿಕ ಹಲ್ಲೆ ನಡೆದಿದ್ದು, ಇದರ ವಿರುದ್ಧ ಧ್ವನಿ ಎತ್ತದೇ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮನಮೋಹನ ಸಿಂಗ್ ನಿರ್ಲಕ್ಷಿಸುತ್ತಿರುವುದು ಖಂಡನೀಯ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಬುಧವಾರ ಇಲ್ಲಿನ ಗುರುದ್ವಾರದಲ್ಲಿ ಪಾಕಿಸ್ತಾನದಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ಭಾರತೀಯ ಮೂಲದ ಪಾಕ್ ಕೈದಿ ಸರಬ್ಜಿತ್‌ಸಿಂಗ್ ಆರೋಗ್ಯ ಶೀಘ್ರ ಚೇತರಿಕೆಯಾಗಲಿ ಎಂದು ಪ್ರಾರ್ಥಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಿ ಮನಮೋಹನ್ ಸಿಂಗ್, ಸಿಖ್ ಸಮುದಾಯದವರೇ ಆಗಿದ್ದರೂ ಸುಳ್ಳು ಆಪಾದನೆಯಲ್ಲಿ ಸಿಲುಕಿ ಕಳೆದ 22 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಪಾಕಿಸ್ತಾನ ಭಾರತೀಯ ಯೋಧರ ಶಿರಚ್ಛೇದ ಮಾಡುತ್ತದೆ. ಚೀನಿ ಸೈನಿಕರು ಭಾರತದ ಭೂ ಪ್ರದೇಶಕ್ಕೆ ನುಗ್ಗಿ ಠಿಕಾಣಿ ಹೂಡುತ್ತಾರೆ. ಪಾಕ್ ಸೈನಿಕರು ಭಾರತೀಯ ಗಡಿಗಳತ್ತ ಗುಂಡಿನ ದಾಳಿ ಮಾಡಿದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೇ ತೆಪ್ಪಗೆ ಕುಳಿತುಕೊಳ್ಳುತ್ತದೆ.
ಸುಳ್ಳು ಆಪಾದನೆ ಮೇಲೆ ಕಳೆದ 22 ವರ್ಷಗಳಿಂದ ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ ನರಕ ಯಾತನೆ ಅನುಭವಿಸಿರುವ ಸರಬ್ಜಿತ್ ಸಿಂಗ್ ಮೇಲೆ ಸಹ ಕೈದಿಗಳು ಎಸಗಿದ ಅಮಾನುಷ ಹಲ್ಲೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು. ಭಾರತದ ಜೈಲುಗಳಲ್ಲಿರುವ ಪಾಕಿಸ್ತಾನಿಗಳಿಗೆ ಭಾರತ ರಾಜಾತಿಥ್ಯ ನೀಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುದ್ವಾರ ಕಮಿಟಿ ಅಧ್ಯಕ್ಷ ಕಿಶನಲಾಲ್ ಗಂಭೀರ, ಶ್ರೀರಾಮ ಸೇನೆಯ ಕುಮಾರ್ ಹಕಾರಿ ಸೇರಿದಂತೆ ಇನ್ನಿತರರು ಇದ್ದರು.